ಶಿವಮೊಗ್ಗ: ಸಾಗರ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಲ್ಲಿ ಸಂಸದರ ಹಸ್ತಕ್ಷೇಪ ಸಹಿಸುವುದಿಲ್ಲ. ನಿಯಮದಂತೆ ನಗರವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಕಾಮಗಾರಿಯನ್ನು ಅತಿಶೀಘ್ರವಾಗಿ ಮುಗಿಸಿ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಂಬುದಾಗಿ ಒತ್ತಾಯಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದಂತ ಅವರು, ಕೆಲವರು ಸಂಸದರ ಬಳಿ ಹೋಗಿ ತಮ್ಮ ಜಾಗ ಉಳಿಸಿಕೊಳ್ಳಲು ಮನವಿ ಮಾಡಿದ್ದು ನನ್ನ ಗಮನಕ್ಕೆ ಬಂದಿದೆ. ಇಂತಹ ಶಾಶ್ವತವಾದ ಯೋಜನೆ ಮಾಡುವಾಗ ಯಾರನ್ನೋ ಉಳಿಸಲು ಹೋಗಿ ಊರಿನ ಅಂದ ಹಾಳಾಗುವುದನ್ನು ನಾನು ಸಹಿಸುವುದಿಲ್ಲ ಎಂದರು.
ಕಾಮಗಾರಿ ಪ್ರಾರಂಭವಾಗಿ ಮರ‍್ನಾಲ್ಕು ವರ್ಷ ಕಳೆದಿದೆ. ಜುಲೈ 10ರೊಳಗೆ ಕಾಮಗಾರಿ ಮುಗಿಸುವ ಆದೇಶವಿದ್ದರೂ ನೀವು ವಿಳಂಬ ಮಾಡುತ್ತಿದ್ದೀರಿ. ಅಗಲೀಕರಣ ಕಾಮಗಾರಿಯಲ್ಲಿ ರಸ್ತೆ, ಡ್ರೈನೇಜ್ ಬಗ್ಗೆ ಸಾಕಷ್ಟು ದೂರುಗಳಿವೆ. ನಿಮ್ಮ ಲೋಪದಿಂದ ನಾನು ಕೆಟ್ಟ ಹೆಸರು ತೆಗೆದುಕೊಳ್ಳಬೇಕಾ ಎಂದು ಪ್ರಶ್ನಿಸಿದ ಶಾಸಕರು, ಎಲ್ಲಿಯವರೆಗೆ ಪರಿಹಾರ ಕೊಟ್ಟಿದ್ದೀರೋ ಅಲ್ಲಿಯವರೆಗೆ ಒಡೆದು ರಸ್ತೆ ಅಗಲೀಕರಣ ಮಾಡಿ. ಇನ್ನು ಯರ‍್ಯಾರಿಗೆ ಪರಿಹಾರ ಬಾಕಿ ಉಳಿಸಿ ಕೊಂಡಿದ್ದೀರೋ ಅವರಿಗೆ ತಕ್ಷಣ ಪರಿಹಾರ ನೀಡಿ. ಒಂದೆರಡು ಕಡೆ ದೇವರ ಮರ ಎಂದು ಬಿಟ್ಟಿದ್ದೀರಿ. ಮರದಲ್ಲಿರುವ ದೇವರಿಗೆ ಪಕ್ಕದಲ್ಲಿರುವ ಯಾವುದಾದರೂ ಮರದಲ್ಲಿ ಚಿಕ್ಕ ಗುಡಿ ಕಟ್ಟಿಸಿ, ಪ್ರತಿಷ್ಠಾಪನೆ ಮಾಡಿ, ಮರ ಕಡಿತಲೆ ಮಾಡಿ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಗಲೀಕರಣ ಕಾಮಗಾರಿಗೆ ಅರಣ್ಯ ಇಲಾಖೆ, ಮೆಸ್ಕಾಂ ಸಹಕಾರ ನೀಡಬೇಕು. ವಿದ್ಯುತ್ ಕಂಬ ಸ್ಥಳಾಂತರ, ಮರ ಕಡಿತಲೆ ತಕ್ಷಣ ಮುಗಿಸಿ ಕೊಡಿ. ಎಲ್ಲೆಲ್ಲಿ ಸರ್ಕಾರಿ ಕಚೇರಿಗಳ ಕಾಂಪೌಂಡ್ ಒಡೆದಿದ್ದೀರೋ ಅದನ್ನು ರಿಪೇರಿ ಮಾಡಿ ಬಣ್ಣ ಹೊಡೆದು ಕೊಡಿ. ಗ್ರಾಮೀಣ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಿದ ನಂತರ ಊರಿನ ಹೆಸರಿನ ನಾಮಫಲಕ, ಪ್ರವಾಸಿ ತಾಣದ ನಾಮಫಲಕ ಕಡ್ಡಾಯವಾಗಿ ಹಾಕಬೇಕು. ಹೆದ್ದಾರಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಎಲ್ಲೆಲ್ಲಿ ಹಸರೀಕರಣಕ್ಕೆ ಅವಕಾಶ ಇದೆಯೋ ಅಲ್ಲಿ ಗಿಡ ನೆಟ್ಟು ಬೆಳೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಮುಂದಿನ ಹತ್ತಿಪ್ಪತ್ತು ದಿನಗಳಲ್ಲಿ ಮಾರ್ಕೇಟ್ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತದೆ. ಮಾರ್ಕೇಟ್ ರಸ್ತೆ, ಬಿ.ಎಚ್.ರಸ್ತೆಯಿಂದಾಗಿ ಊರಿನ ಅಂದ ಕೆಟ್ಟಿದೆ. ತಕ್ಷಣ ಎರಡೂ ರಸ್ತೆ ಅಭಿವೃದ್ದಿಪಡಿಸಬೇಕು. ಈಗಾಗಲೆ ಮಾರ್ಕೇಟ್ ರಸ್ತೆಯಲ್ಲಿ ಜಾಗ ಬಿಟ್ಟುಕೊಡಲು ಸ್ಥಳೀಯರು ಒಪ್ಪಿದ್ದಾರೆ. ಕೆಳದಿ ವೃತ್ತದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ಪುತ್ಥಳಿ ನಿರ್ಮಿಸಲು ಯೋಜನೆ ರೂಪಿಸಿದೆ ಎಂದು ಹೇಳಿದರು.
ಈ ಸಭೆಯಲ್ಲಿ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ರಶ್ಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೋಕೇಶ್, ಮಮತಾ, ರಾಕೇಶ್, ಪಿಡಬ್ಲ್ಯೂಡಿಯ ಅನಿಲಕುಮಾರ್, ಶಾಸಕರ ವಿಶೇಷಾಧಿಕಾರಿ ಟಿ.ಪಿ.ರಮೇಶ್, ಪೌರಾಯುಕ್ತ ಎಚ್.ಕೆ.ನಾಗಪ್ಪ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ: ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ