ಬೆಂಗಳೂರು: ಅರೆ ನ್ಯಾಯಿಕ ಪ್ರಕರಣಗಳ ವಿಲೇವಾರಿಯಲ್ಲಿದೋಷಪೂರಿತ ಆದೇಶಗಳನ್ನು ಹೊರಡಿಸಿರುವ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಉಪ ವಿಭಾಗದ ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಉಪ ವಿಭಾಗಾಧಿರಿಗಳಾದ ಅಪೂರ್ವ ಬಿದರಿ ಅವರ ವಿರುದ್ಧ FIR ದಾಖಲಿಸುವಂತೆ ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಶ್ವಾಸ್ ಅವರು ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಜೂನ್ 30ರಂದು ಪತ್ರ ಬರೆಯಲಾಗಿದ್ದು, ಅಪೂರ್ವ ಬಿದರಿ ವಿರುದ್ಧ ಎಫ್ಐಆರ್ ದಾಖಲಿಸಿ ತುರ್ತಾಗಿ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಪತ್ರದಲ್ಲಿ ಏನಿದೆ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀಮತಿ ಅಪೂರ್ವ ಬಿದರಿ, ಕೆ.ಎ.ಎಸ್ (ಕಿ.ಶ) ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಬೆಂಗಳೂರು ನಗರ ಜಿಲ್ಲೆ ಇವರು ಅರೆ ನ್ಯಾಯಿಕ ಪ್ರಕರಣಗಳಲ್ಲಿ ದೋಷಪೂರಿತವಾಗಿ ಆದೇಶಗಳನ್ನು ಹೊರಡಿಸಿ ಮೇಲ್ಮನವಿ ಪ್ರಕರಣಗಳನ್ನು ವಿಲೇವಾರಿ ಮಾಡಿರುವ ವಿಧಾನಗಳನ್ನು ಪರಿಶೀಲಿಸುವ ಸಂಬಂಧ ತಂಡವನ್ನು ರಚಿಸಿ ಸದರಿ ಅಧಿಕಾರಿಯವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಇಲ್ಲಿಯವರೆಗೂ ಹೊರಡಿಸಿರುವ ಆದೇಶಗಳಿಗೆ ಸಂಬಂಧಿಸಿದ ಕಡತಗಳನ್ನು ಪಡೆದು ಪರಿಶೀಲಿಸಿದಾಗ 53 ಅರೆ ನ್ಯಾಯಿಕ ಪ್ರಕರಣಗಳನ್ನು ನಿರ್ಧರಿಸುವಲ್ಲಿ ನ್ಯೂನ್ಯತೆಗಳು ಉಂಟಾಗಿರುವ ಕಾರಣ ಶ್ರೀಮತಿ ಅಪೂರ್ವ ಬಿದರಿ, ಕೆಎಎಸ್, ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪ ವಿಭಾಗ, ಬೆಂಗಳೂರು ನಗರ ಜಿಲ್ಲೆ ರವರ ವಿರುದ್ಧ ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ ಸೆಕ್ಷನ್ 35 ರಡಿಯಲ್ಲಿ ಹಾಗೂ ಭಾರತೀಯ ನ್ಯಾಯಸಂಹಿತೆ 257 ರಡಿಯಲ್ಲಿ ಶಿಸ್ತು ಕ್ರಮ ಜರುಗಿಸಬಹುದೆಂದು ಪ್ರಸ್ತಾವನೆಯನ್ನು ಉಲ್ಲೇಖ(2) ರಂತೆ ಸರ್ಕಾರಕ್ಕೆ ಸಲ್ಲಿಸಲಾಗಿರುತ್ತದೆ.
ಮುಂದುವರೆದು, ಸದರಿ ಪ್ರಸ್ತಾವನೆಯನ್ನು ಸರ್ಕಾರದ ಹಂತದಲ್ಲಿ ಪರಿಶೀಲಿಸಿ, ಶ್ರೀಮತಿ ಅಪೂರ್ವ ಬಿದರಿ, ಕೆಎಎಸ್, ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಬೆಂಗಳೂರು ನಗರ ಜಿಲ್ಲೆ ರವರ ವಿರುದ್ಧ ಕರ್ನಾಟಕ ಭೂಕಂದಾಯ ಅಧಿನಿಯಮದ 1964 ರ ಸೆಕ್ಷನ್ 35 ರಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 257ರ ಅಡಿಯಲ್ಲಿ FIR ದಾಖಲಿಸಲು ಕ್ರಮ ಕೈಗೊಳ್ಳುವಂತೆ ಉಲ್ಲೇಖ (1) ಪತ್ರದಲ್ಲಿ ನಿರ್ದೇಶಿಸಲಾಗಿರುತ್ತದೆ.
ಆದ್ದರಿಂದ ಉಲ್ಲೇಖ (2) ರ ಪ್ರಸ್ತಾವನೆಯನ್ನು ಆಧರಿಸಿ, ಉಲ್ಲೇಖ (1) ರ ಸರ್ಕಾರದ ಪತ್ರದಲ್ಲಿ ನೀಡಿರುವ ನರ್ದೇಶನದಂತೆ ಶ್ರೀಮತಿ ಅಪೂರ್ವ ಬಿದರಿ, ಕೆಎಎಸ್, ಉಪವಿಭಾಗಾಧಿಕಾರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಬೆಂಗಳೂರು ನಗರ ಜಿಲ್ಲೆ ಇವರ ವಿರುದ್ಧ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಸೆಕ್ಷನ್ 35 ರಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 257ರ ಅಡಿಯಲ್ಲಿ FIR ದಾಖಲಿಸಿ, ಸದರಿ FIR ಪ್ರತಿಯೊಂದಿಗೆ ಅನುಪಾಲನಾ ವರದಿಯನ್ನು ತುರ್ತಾಗಿ ಸಲ್ಲಿಸಲು ಸೂಚಿಸಿದೆ.
ಉಲ್ಲೇಖ (2) ರ ವರದಿಯನ್ನು ಹಾಗೂ ಉಲ್ಲೇಖ (1) ರ ಪತ್ರವನ್ನು ಈ ಪತ್ರದೊಂದಿಗೆ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ ಲಗತ್ತಿಸಿದೆ.