ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೇಗೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವಾಗ ಅಸ್ಥಿಪಂಜರ ಪತ್ತೆಯಾಗಿದೆ. ಎಂಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್ಸ್‌ನ ಬಳಿ ಮೂಳೆಗಳು ಮತ್ತು ತಲೆಬುರುಡೆ ಸಿಕ್ಕಿವೆ. ಇದೀಗ ಈ ಒಂದು ಅಸ್ತಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದು ಪುರುಷನ ಅಸ್ತಿ ಪಂಜರವಾಗಿದೆ ಎಂದು ತಿಳಿದುಬಂದಿದೆ.
ಹೌದು ಜೂನ್ 20 ರಂದು ಕಾರ್ಮಿಕರು ಶೌಚಗುಂಡಿ ಸ್ವಚ್ಛ ಮಾಡುವಾಗ ಮೂಳೆಗಳು ಮತ್ತು ತಲೆಬುರುಡೆ ಸಿಕ್ಕಿವೆ. ಇದು ಮನುಷ್ಯನ ಅಸ್ಥಿಪಂಜರವೋ ಅಥವಾ ಪ್ರಾಣಿಯದೋ ಎಂದು ತಿಳಿಯಲು ಪೊಲೀಸರು ಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಿದ್ದರು. ಇದೀಗ ಇಂಗು ಗುಂಡಿಯಲ್ಲಿ ಪತ್ತೆಯಾಗಿರುವುದು ಪುರುಷನ ಅಸ್ತಿಪಂಜರ ಎಂದು ತಿಳಿದುಬಂದಿದೆ. ಸುಮಾರು 153 ಸೆಂಟಿಮೀಟರ್ ಉದ್ದವುಳ್ಳ 30 ರಿಂದ 35 ವರ್ಷದ ವ್ಯಕ್ತಿ ಅಸ್ತಿ ಪಂಜರ ಪತ್ತೆಯಾಗಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಕೊಲೆ ಶಂಕೆ ಇಲ್ಲ ಎಂದು ವರದಿ ಬಂದಿದೆ. ಅಷ್ಟೇ ಅಲ್ಲದೇ ಪಂಜರದ ಮೇಲೆ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ.
ಹೀಗಾಗಿ ವ್ಯಕ್ತಿ ಆಯತಪ್ಪಿ ಇಂಗು ಗುಂಡಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ಕಳೆದ ಎರಡು ವರ್ಷದ ಹಿಂದೆ ಇಂಗು ಗುಂಡಿಯಲ್ಲಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಖಾಸಗಿ ಆಸ್ಪತ್ರೆಯ ತಜ್ಞವೈದ್ಯರು ನಡೆದ ಪ್ರಾಥಮಿಕ ಪರೀಕ್ಷೆಯಲ್ಲಿ ಇವೆಲ್ಲ ಅಂಶಗಳು ತಿಳಿದು ಬಂದಿವೆ. ಸದ್ಯ ಅಸ್ತಿಪಂಜರದ ಮುಂದಿನ ಹಂತದ ಪರಿಕ್ಷೆ ನಡೆಸಲಿದ್ದಾರೆ. ಡಿಎನ್ಎ, ಫಿಂಗರ್ ಪ್ರಿಂಟ್ ಸೇರಿದಂತೆ ಅನೇಕ ರೀತಿಯ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳ ವರದಿಯ ನಂತರ ಮೃತನ ಡಿ ಎನ್ ಎ ಮಾದರಿಗಳು ಪತ್ತೆಯಾಗಲಿವೆ. ವರದಿ ಆಧಾರದ ಮೇಲೆ ಮೃದನಪತ್ತೆ ಕಾರ್ಯ ಪೊಲೀಸರು ಆರಂಭಿಸಲಿದ್ದಾರೆ.