ಬೆಂಗಳೂರು : ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 15 ವರ್ಷಗಳ ಸ್ವಯಂಚಾಲಿತ ವಿಶೇಷ ಮುಂಬಡ್ತಿ ಮಂಜೂರು ಮಾಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಉಲ್ಲೇಖ (1) ರ ಸರ್ಕಾರದ ಆದೇಶದಲ್ಲಿ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರ, ಲಘು ಮತ್ತು ಕಠಿಣ ದಂಡನೆಗಳನ್ನು ವಿಧಿಸಲು, ಕಾಲಬದ್ದ ವೇತನ ಬಡ್ತಿ ಮಂಜೂರಾತಿ, ಪರೀಕ್ಷಾರ್ಥ ಅವಧಿ ಘೋಷಣೆ ಹಾಗೂ ಸೇವಾ ವಿಷಯ ನಿರ್ವಹಣೆ ಮಾಡಲು ಪ್ರಾಧಿಕಾರವನ್ನು ನಿರ್ದಿಷ್ಟಪಡಿಸಿ ಸರ್ಕಾರವು ಆದೇಶಿಸಿದೆ.
ಉಲ್ಲೇಖ (2)ರಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸೇವಾ ವಿಷಯಗಳ ನಿರ್ವಹಣೆ ಬಗ್ಗೆ ಸಕ್ಷಮ ಪ್ರಾಧಿಕಾರವನ್ನು ನಿರ್ದಿಷ್ಟಪಡಿಸಲಾಗಿದ್ದು, ಅದರಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ 10 ವರ್ಷಗಳ ಕಾಲಮಿತಿ ವೇತನ ಬಡ್ತಿ, 15 ವರ್ಷಗಳ ಸ್ವಯಂಚಾಲಿತ ವಿಶೇಷ ಮುಂಬಡ್ತಿ, 20, 25 ಮತ್ತು 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿಗಳ ಮಂಜೂರಾತಿಗಾಗಿ ಆಯುಕ್ತರು, ಪಂಚಾಯತ್ ರಾಜ್ ಆಯುಕ್ತಾಲಯ, ಇವರನ್ನು ಪ್ರಾಧಿಕಾರವನ್ನಾಗಿ ನಿರ್ದಿಷ್ಟಪಡಿಸಲಾಗಿದೆ.
ಉಲ್ಲೇಖ (3) ರಲ್ಲಿ 10 ವರ್ಷಗಳ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡಲು ಅಧಿಕಾರವನ್ನು ಆಯಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿದೆ.
ಪ್ರಸ್ತುತ 15 ವರ್ಷ ಪೂರ್ಣಗೊಳಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಖ್ಯೆ ಹೆಚ್ಚಿಗೆ ಇರುವುದರಿಂದ ಮತ್ತು 15 ವರ್ಷಗಳ ಸ್ವಯಂಚಾಲಿತ ವಿಶೇಷ ಮುಂಬಡ್ತಿಯನ್ನು ನಿಗಧಿತ ಅವಧಿಯೊಳಗೆ ಮಂಜೂರು ಮಾಡಲು ಅನುವಾಗುವಂತೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಿ, ಉಲ್ಲೇಖ (4)ರ ಅನುಮೋದನೆಯಂತೆ ಮುಂದಿನ ಆದೇಶದವರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 15 ವರ್ಷಗಳ ಸ್ವಯಂಚಾಲಿತ ವಿಶೇಷ ಮುಂಬಡ್ತಿ ಮಂಜೂರು ಮಾಡುವ ಅಧಿಕಾರವನ್ನು ಆಯಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ.