ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಶಾಕ್ ಅನ್ನು ಎಸ್ಕಾಂ ಕಂಪನಿಗಳು ನೀಡಿವೆ. ಜುಲೈ.1ರ ಇಂದಿನಿಂದ ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯೋರು ಸಾವಿರಾರು ರೂಪಾಯಿ ಪಾವತಿಸಬೇಕಿದೆ.
ಈ ಬಗ್ಗೆ ಎಸ್ಕಾಂಗಳಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಜೆಸ್ಕಾಂನ ವಿದ್ಯುತ್ ಸರಬರಾಜು ನಿಗಮ ವ್ಯಾಪ್ತಿಯಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಅಳವಡಿಸುವುದು ಜುಲೈ.1, 2025ರಿಂದ ಕಡ್ಡಾಯವಾಗಿರುತ್ತದೆ. ಆದರೇ ಹೆಚ್.ಡಿ ಹೊರತು ಪಡಿಸಿ ಎಂದು ತಿಳಿಸಿವೆ.
ಇದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಆದೇಶವಾಗಿದೆ. ಅದನ್ನು ರಾಜ್ಯಾಧ್ಯಂತ ಎಸ್ಕಾಂಗಳು ಜಾರಿಗೊಳಿಸುತ್ತಿವೆ. ನಿಗದಿಪಡಿಸಿರುವಂತ ದರದಲ್ಲಿ ರೀಟೇಲ್ ಔಟ್ ಲೆಟ್ ಗಳಲ್ಲಿ ಸ್ಮಾರ್ಟ್ ಮೀಟರ್ ಗಳನ್ನು ಖರೀದಿಸಿ, ವಿದ್ಯುತ್ ಸಂಪರ್ಕ ಪಡೆಯುವಂತೆ ಮನವಿ ಮಾಡಿವೆ.
ಸ್ಮಾರ್ಟ್ ಮೀಟರ್ ವೈಶಿಷ್ಟ್ಯ
ಹಳೆಯ ಮಾದರಿಯ ಮೀಟರ್ಗಳಿಗಿಂತ ವಿಶಿಷ್ಟವಾಗಿರುವ ಸ್ಮಾರ್ಟ್ ಮೀಟರ್ಗಳು ಜಿಪಿಆರ್ಎಸ್/ಆರ್ ಎಫ್ ಆಧಾರಿತ ಸಂವಹನ ಡೇಟಾ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರುತ್ತದೆ. ಅಡ್ವಾನ್ಸ್ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (ಎಎಂಐ) ತಂತ್ರಜ್ಞಾನದ ಸ್ಮಾರ್ಟ್ ಮೀಟರ್ಗಳು ವಿದ್ಯುತ್ ಬಳಕೆ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಬೆಸ್ಕಾಂ ನಡುವೆ ನೇರ ಸಂಪರ್ಕ ಕಲ್ಪಿಸಲಿದೆ.
ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ. ಮುಂಚಿತವಾಗಿ ಹಣ ಪಾವತಿಸಿ ತಮ್ಮ ಆಯ್ಕೆಯ ದಿನಗಳ ಅವಧಿಗೆ ರಿಜಾರ್ಜ್ ಮಾಡಿಕೊಳ್ಳಬಹುದು. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬಹುದಾಗಿದೆ.