ಬೆಂಗಳೂರು : ಒಂದೆಡೆ ನವೆಂಬರ್ ನಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಅಂತ ಸುದ್ದಿ ಹರಿದಾಡುತ್ತಿದ್ದು, ಇನ್ನೊಂದೆಡೆ ವರ್ಷಾಂತ್ಯಕ್ಕೆ ಕಾಂಗ್ರೆಸ್ನಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬ ಚರ್ಚೆ ವಿಚಾರವಾಗಿ, ಸಣ್ಣಪುಟ್ಟ ಬದಲಾವಣೆಗಳಾಗಲಿದೆ. ಹಾಗಂತ ಭಾರಿ ಬದಲಾವಣೆ ಯಾವುದೂ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಯಾವುದೇ ದೊಡ್ಡ ಬದಲಾವಣೆ ಆಗಲ್ಲ. ಕೆಲ ಸಚಿವರ ಬದಲಾವಣೆ ಆಗಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸಿಯೇ ಇಲ್ಲ. ಪ್ರಯತ್ನ ನಡೆಸಿದ್ದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ, ಅಲ್ಲೇ ಇದ್ದೇನೆ. ನಮ್ಮನ್ನು ಪುಶ್ ಮಾಡೋರು ಇಲ್ವಲ್ಲ. ಬಿಜೆಪಿ ರಾಜ್ಯಾದ್ಯಕ್ಷ ಬದಲಾವಣೆ ನೋಡಿಕೊಂಡು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತಾ ಅನ್ನೋ ಪ್ರಶ್ನೆಗೆ, ಬಿಜೆಪಿ ಫಾರ್ಮುಲಾ ಬೇರೆ, ನಮ್ಮದು ಬೇರೆ. ಅವರ ಐಡಿಯಾಲಜಿ ಬೇರೆ, ನಮ್ಮದು ಬೇರೆ. ಬಿಜೆಪಿಗೂ ನಮ್ಮ ಆಯ್ಕೆಗೂ ಸಂಬಂಧವಿಲ್ಲ ಎಂದು ತಿಳಿಸಿದರು.
ಜಲಸಂಪನ್ಮೂಲ ಇಲಾಖೆ ಮೇಲೆ ಶಾಸಕ ರಾಜು ಕಾಗೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲಿನಿಂದ ನೀರಾವರಿ ಸಮಸ್ಯೆ ಬಗ್ಗೆ ರಾಜು ಕಾಗೆ ಹೇಳ್ತಾನೆ ಇದ್ದಾರೆ. ಇದು ಸಿಎಂ ಗಮನಕ್ಕೆ ಕೂಡ ಬಂದಿದೆ. ಈ ಬಗ್ಗೆ ಸಿಎಂ ಅವರು ಡಿಸಿಎಂ ಕರೆದು ಹೇಳುತ್ತಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಹಣವಿದೆ, ಹಣವಿಲ್ಲ ಅಂತ ಯಾರು ಹೇಳಿದ್ದು? ಬಾಕಿ ಬಿಲ್ಗಳು ಕೂಡ ಇವೆ. ಮೂರು ವರ್ಷದಷ್ಟು ಬಿಲ್ ಬಾಕಿ ಇದ್ದೇ ಇರುತ್ತವೆ ಎಂದರು.








