ಬೆಂಗಳೂರು : ಚಾಕೊಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಇತ್ತೀಚಿಗೆ ಕೋಲಾರದಲ್ಲಿ ಚಾಕಲೇಟ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದ್ದ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಬೆಂಗಳೂರಿಗೆ ಹೊಸ ಮಾದರಿಯ ಚಾಕ್ಲೇಟ್ ಎಂಟ್ರಿ ಆಗಿದ್ದು, ಗಾಂಜಾ ಮಿಶ್ರಿತ ಚಾಕಲೇಟನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ಹೌದು ಜೆಲ್ಲಿ ಚಾಕೊಲೇಟ್ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಇದೀಗ ಜೆಲ್ಲಿ ಗಾಂಜಾ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗಾಂಜಾ ಸೊಪ್ಪು, ಹ್ಯಾಶ್ ಆಯಿಕ್ಗಿಂತ ಈ ಜೆಲ್ಲಿ ಗಾಂಜಾ ಕಿಕ್ಕು ಹೆಚ್ಚು ಎನ್ನಲಾಗುತ್ತಿದೆ. ಪಾಕೆಟ್ನಲ್ಲಿಟ್ಟುಕೊಂಡರೂ ಯಾರಿಗೂ ಡೌಟ್ ಬರಲ್ಲ. ಒಂದು ವೇಳೆ ಪೊಲೀಸರೇ ತಡಕಾಡಿದರೂ ಪೆಡ್ಲರ್ ಯಾರು, ಗ್ರಾಹಕ ಯಾರು ಎಂದು ಕಂಡು ಹಿಡಿಯುವುದಕ್ಕೆ ಆಗುವುದಿಲ್ಲವಂತೆ. ಅಲ್ಲದೇ ಗಾಂಜಾದ ಬಟ್ಟಿ ಇಳಿಸಿರುವ ರಸವನ್ನೇ ಈ ಜೆಲ್ಲಿ ಚಾಕೊಲೇಟ್ಗಳ ಜೊತೆ ಬೆರೆಸುತ್ತಾರೆ. ಒಂದು ಪ್ಯಾಕ್ ಜೆಲ್ಲಿ ಗಾಂಜಾಗೆ ಬರೋಬ್ಬರಿ 6 ಸಾವಿರ ರೂ. ಜೆಲ್ಲಿ ಬಾಯಿಗೆ ಇಟ್ಟ ಬಳಿಕ ಕರಗುತ್ತೆ. ಆಮೇಲೆ ಅಗೆದಷ್ಟು ಮತ್ತಲ್ಲಿ ತಲೆತಿರುಗುತ್ತಂತೆ.