ಬೆಂಗಳೂರು : ಕಾರುಗಳ ಓವರ್ ಟೆಕ್ ವಿಚಾರದಲ್ಲಿ ಗಲಾಟೆಯಾಗಿ ಕಾರಿನಲ್ಲಿದ್ದ ಮುಸ್ಲಿಂ ವ್ಯಕ್ತಿಗಳಿಗೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಬೆಂಬಲಿಗರು ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಇದೀಗ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಮೂವರು ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಬಳಿ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ ಹಲ್ಲೆ, ಗೂಂಡಾಗಿರಿ ನಡೆಸಿದ ಆರೋಪದಲ್ಲಿ ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ, ಕಾರು ಚಾಲಕ ಹಾಗೂ ಗನ್ಮ್ಯಾನ್ ಮೇಲೆ ಎಫ್ಐಆರ್ ದಾಖಲಾಗಿದೆ.
ಅನಂತ್ ಕುಮಾರ್ ಹೆಗಡೆ ಅವರು ತೆರಳುತ್ತಿದ್ದ ಕಾರನ್ನು, ಓವರ್ ಟೇಕ್ ಮಾಡಲಾಯಿತು ಎಂಬ ಕಾರಣಕ್ಕೆ ಇನ್ನೋವಾ ಕಾರಿನಲ್ಲಿದ್ದ ನಾಲ್ವರ ಮೇಲೆ, ಅನಂತ್ ಕುಮಾರ್ ಹೆಗಡೆ ಪುತ್ರ ಅಶುತೋಷ್, ಚಾಲಕ ಹಾಗೂ ಗನ್ಮ್ಯಾನ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಂಪುರ ಹೋಬಳಿಯ ಹಾಲೇನಹಳ್ಳಿ ಗ್ರಾಮದ ಸಲ್ಮಾನ್ ಖಾನ್(30), ಸೈಫ್ ಖಾನ್(28) ಇಲಿಯಾಸ್ ಖಾನ್(50), ಗುಲ್ ಷಿರಾ ಉನ್ನೀಸಾ(45) ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರಿಗೆ ದಾಬಸ್ಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.