ಚಿಕ್ಕಮಗಳೂರು : ಗೂಗಲ್ ಮ್ಯಾಪ್ ಆಧರಿಸಿ ಚಾರಣ ಹೋಗಿದ್ದ 10 ಜನ ವಿದ್ಯಾರ್ಥಿಗಳು ದಿಕ್ಕುತಪ್ಪಿ ಕಾಡಿನಲ್ಲಿ ಸಿಲುಕಿ ನಿತ್ರಾಣಗೊಂಡಿದ್ದರು. ಅವರನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹೌದು ನಿನ್ನೆ ಚಿತ್ರದುರ್ಗ ಮೂಲದ ಐವರು ಕಾಲೇಜು ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನದುರ್ಗ ಮತ್ತು ಬಂಡಾಜೆ ಜಲಪಾತಕ್ಕೆ ಚಾರಣ ಹೋಗಲು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರು.
ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಣಿಝರಿ ಕಡೆಯಿಂದ ಚಾರಣ ಆರಂಭಿಸಬೇಕಿತ್ತು. ಗೂಗಲ್ ಮ್ಯಾಪ್‌ನಲ್ಲಿ ಬಂಡಾಜೆ ಟ್ರಕ್ಕಿಂಗ್ ಎಂದು ನಮೂದಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯ ದಿಡಪೆ ಮಾರ್ಗ ತೋರಿಸಿದೆ. ಅಲ್ಲಿಗೆ ಬಂದು ಚಾರಣ ಆರಂಭಿಸಿದ್ದು, ಬಂಡಾಜೆ ಜಲಪಾತ ತನಕ ಹೋಗಿದ್ದಾರೆ.
ವಾಪಸ್ ಬರಲು ಬಲ್ಲಾಳರಾಯನದುರ್ಗ ಹಾಗೂ ರಾಣಿಝರಿ ಕಡೆಯ ಮಾರ್ಗ ಹಿಡಿದಿದ್ದಾರೆ. ಅದಕ್ಕೂ ಮುನ್ನ ತಾವು ಬಂದಿದ್ದ ಟೆಂಪೊ ಟ್ರಾವೆಲರ್ ಚಾಲಕನಿಗೆ ವಿಷಯ ಮುಟ್ಟಿಸಿ ರಾಣಿಝರಿ ಕಡೆಗೆ ಬರಲು ತಿಳಿಸಿದ್ದಾರೆ. ವಾಪಸ್ ಚಾರಣ ಹೊರಟ ಸ್ವಲ್ಪ ದೂರದಲ್ಲೇ ದಿಕ್ಕು ತಪ್ಪಿದ್ದಾರೆ. ಅಷ್ಟರಲ್ಲಿ ಕತ್ತಲಾಗಿದ್ದರಿಂದ ದಾರಿ ಕಾಣಿಸದೆ ಕಂಗಾಲಾಗಿದ್ದಾರೆ. ಅಲ್ಲದೇ ನೆಟ್‌ವರ್ಕ್ ಇಲ್ಲದ ಕಾರಣ ಗೂಗಲ್ ಮ್ಯಾಪ್ ಕೂಡ ಕೆಲಸ ಮಾಡಿಲ್ಲ.
ಚಾಲಕನ ಮೂಲಕ ವಿಷಯ ತಿಳಿದ ಬಾಳೂರು ಠಾಣೆ ಸಬ್ ಇನ್‌ಸ್ಪೆಕ್ಟರ್ ದಿಲೀಪ್‌ಕುಮಾರ್, ಸ್ನೇಕ್ ಆರೀಫ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಕಾಡಿಗೆ ಹೋಗಿ ಆರು ಗಂಟೆಗಳ ಕಾಲ ಹುಡುಕಾಟ ನಡೆಸಿದರು. ಮಧ್ಯರಾತ್ರಿ 2 ಗಂಟೆ ವೇಳೆಗೆ ವಿದ್ಯಾರ್ಥಿಗಳು ಸಿಕ್ಕಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತಂದರು.