ಬೆಂಗಳೂರು : ರಾಜ್ಯದಲ್ಲಿ ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರರೂ ಆದ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಡಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ವಾರ್ಷಿಕ 250 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳ ಲಾಭಕಡಿವಾಣ ತಲುಪದಂತೆ ಹಾಕಲು ರಾಜ್ಯಾದ್ಯಂತ ಸಮಗ್ರ ತನಿಖೆ ಕೈಗೊಳ್ಳುವ ಚಿಂತನೆ ನಡೆದಿದೆ ಎಂದು ಹೇಳಿದರು.
ಮನೆ ಬಾಡಿಗೆ ಹಣ ಪಡೆಯುತ್ತಿರುವವರೂ ಗೃಹಜ್ಯೋತಿ ಯೋಜನೆ ಪಡೆಯುತ್ತಿದ್ದಾರೆ. ತೆರಿಗೆ, ಜಿಎಸ್ ಪಾವತಿಸುವ ಕುಟುಂಬಕ್ಕೂ ಗೃಹಲಕ್ಷ್ಮಿ ಪಾವತಿಯಾಗುತ್ತಿದೆ. ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಕಾರ್ಡಗಳ ವ್ಯತ್ಯಾಸ ಗೊಚರಿಸುತ್ತಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಸಮಗ್ರ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಕೊಡುವ 150 ರೂ. ಬದಲು ಆಹಾರ ಕಿಟ್ ನೀಡುವ ಚಿಂತನೆ ನಡೆಸಲಾಗಿದೆ. ಈ ಹಿಂದೆ 5 ಕೆ.ಜಿ ಅಕ್ಕಿ ಜತೆಗೆ 5 ಕೆ.ಜಿ ಪಡಿತರದ 150 ರೂ. ನಗದನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಆದರೆ, ಹಣದ ಮೌಲ್ಯದಲ್ಲಿ ತೊಗರಿ ಬೆಳೆ, ಕೊಬ್ಬರಿ ಎಣ್ಣೆ ಸಕ್ಕರೆ, ಜೋಳ ಹೊಂದಿರುವ ಆಹಾರ ಧಾನ್ಯದ ಕಿಟ್ ವಿತರಿಸುವ ಚಿಂತನೆಯಿದೆ. ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.