ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿ ಹಲವು ದಶಕದಿಂದ ಅರಣ್ಯ ಭೂಮಿ ಒತ್ತುವರಿ ಆಗಿದ್ದು, ತಾವು ಸಚಿವನಾದ ತರುವಾಯ 2 ವರ್ಷದಲ್ಲಿ ಸುಮಾರು 4000 ಕೋಟಿ ರೂ. ಮಾರುಕಟ್ಟೆ ಮೌಲ್ಯದ 128 ಎಕರೆ ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿರುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 444 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅರಣ್ಯ ಜಮೀನು ಹಿಂಪಡೆದು, ಉದ್ಯಾನವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕಾನೂನು ಹೋರಾಟ ನಡೆದಿದೆ ಎಂದು ಅರಣ್ಯ ಸಚಿವರು ತಿಳಿಸಿದರು.
ಹಳೆ ಮೈಸೂರು ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ವಿವಿಧ ವ್ಯಕ್ತಿ, ಸಂಸ್ಥೆಗಳಿಗೆ ಸುಮಾರು 5050 ಎಕರೆ ಅರಣ್ಯ ಭೂಮಿಯನ್ನು ದೀರ್ಘಕಾಲದ (999 ವರ್ಷ) ಗುತ್ತಿಗೆ ನೀಡಲಾಗಿತ್ತು. ಈ 999 ವರ್ಷದ ಗುತ್ತಿಗೆ ಅವಧಿಯನ್ನು ಸರ್ಕಾರ 99 ವರ್ಷಕ್ಕೆ ಇಳಿಕೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈಗ ಇವುಗಳಲ್ಲಿ ಕೆಲವು ಗುತ್ತಿಗೆ ಅವಧಿ ಮುಗಿದಿದ್ದರೂ ಅರಣ್ಯ ಇಲಾಖೆಗೆ ಜಮೀನು ಬಿಟ್ಟುಕೊಡದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಎಲ್ಲ ಭೂಮಿ ಹಿಂಪಡೆಯಲು ಮತ್ತು ಆ ಸಂಸ್ಥೆಗಳಿಂದ ಇಲಾಖೆಗೆ ಬರಬೇಕಾದ ಸಾವಿರಾರು ಕೋಟಿ ರೂ. ಬಾಕಿ ವಸೂಲಿಗೆ ಕಾನೂನು ಹೋರಾಟ ಮಾಡಲಾಗುತ್ತಿದೆ. ಹೈಕೋರ್ಟ್ ನಲ್ಲಿ ಈ ಪ್ರಕರಣಗಳ ಅರ್ಜಿಯ ವಿಚಾರಣೆ ಹಂತದಲ್ಲಿದೆ ಎಂದು ವಿವರ ನೀಡಿದರು.