ಮೈಸೂರು : ಅನ್ಯ ಜಾತಿಯ ಯುವಕನನ್ನು ಮದುವೆಯಾಗಲು ಮಗಳು ಮನೆ ಬಿಟ್ಟು ಹೋಗಿದಕ್ಕೆ ಒಂದೇ ಕುಟುಂಬದ ಮೂವರು ಸಾವಿಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಬೂದನೂರು ಗ್ರಾಮದ ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಪುತ್ರಿ ಹರ್ಷಿತಾ ಮೃತ ದುರ್ದೈವಿಗಳು.
ಮಾದೇವಸ್ವಾಮಿ ಮತ್ತು ಮಂಜುಳಾ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದರೆ, ಎರಡನೇ ಮಗಳು ಹರ್ಷಿತಾ ಬಿಸಿಎ ಓದುತ್ತಿದ್ದಳು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾದೇವಸ್ವಾಮಿ ತಮ್ಮ ಸ್ವಗ್ರಾಮ ಬಿಟ್ಟು ಮೈಸೂರು ಜಿಲ್ಲೆಯ ಎಚ್.ಡಿ ಕೋಟೆಯಲ್ಲಿ ವಾಸವಿದ್ದರು. ಅಲ್ಲಿಯೇ ಸ್ವಂತ ಮನೆ ಕೂಡ ಖರೀದಿ ಮಾಡಿದ್ದರು.
ನಾಲ್ಕು ಜನರ ಈ ಪುಟಾಣಿ ಸಂಸಾರದಲ್ಲಿ ಒಮ್ಮೆಲೆ ಬಿರುಗಾಳಿ ಎದ್ದಿದ್ದು, ಹಿರಿಯ ಮಗಳು ಅರ್ಪಿತಾ ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ. ಇದರಿಂದ ಮರ್ಯಾದೆಗೆ ಹೆದರಿದ ತಂದೆ ಮಹಾದೇವಸ್ವಾಮಿ ಈ ಮದುವೆ ಬೇಡ ಎಂದು ನಿರಾಕರಿಸಿದ್ದಾರೆ. ತಂದೆಯ ಈ ನಿರ್ಧಾರದ ವಿರುದ್ಧ ನಿಂತ ಅರ್ಪಿತಾ ಮನೆ ಬಿಟ್ಟು ಹೋಗಿದ್ದಾಳೆ.
ಇದೀಗ ಮೂವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಿನ್ನೆ ಶವಗಳನ್ನು ಹೊರತೆಗೆಯಲಾಗಿದೆ. ತನ್ನ ಅಪ್ಪ ಅಮ್ಮ ತಂಗಿ ಸಾವನ್ನಪ್ಪಿರುವ ವಿಷಯ ತಿಳಿದಿದ್ದರೂ ಸಹ ಓಡಿಹೋದ ಹಿರಿಯ ಮಗಳು ಅರ್ಪಿತಾ ತಂದೆ ತಾಯಿ ಹಾಗು ತಂಗಿಯ ಅಂತ್ಯಸಂಸ್ಕಾರಕ್ಕೂ ಬಂದಿಲ್ಲ. ಹೀಗಾಗಿ ಗ್ರಾಮದ ಜನರು ಕಷ್ಟಪಟ್ಟು ಓದಿಸಿದಕ್ಕೆ ತಂದೆ ತಾಯಿಗೆ ಹೀಗಾ ಮರ್ಯಾದೆ ಕೊಡೋದು? ಇಂತಹ ಮಕ್ಕಳು ಯಾರಿಗೂ ಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಳಿಕ ಸಂಬಂಧಿಕರು ಗ್ರಾಮಸ್ಥರು ಸೇರಿಕೊಂಡು ಅಂತ್ಯಸಂಸ್ಕಾರ ನೇರವೇರಿಸಿದರು.