ಯಾದಗಿರಿ : ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ತನ್ನ ಪತ್ನಿಯನ್ನು ಕೆಳಗಿಳಿಸಿ ಆಕೆಯ ಸ್ಥಾನದಲ್ಲಿ ಬೇರೊಬ್ಬರನ್ನು ನೇಮಿಸಿದ್ದಕ್ಕೆ ಆಕ್ರೋಶಗೊಂಡ ಪತಿ, ಜಿಲ್ಲಾ ಕಾಂಗ್ರೆಸ್ ಕಚೇರಿಗೇ ಬೆಂಕಿಯಿಟ್ಟ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಮಂಜುಳಾ ಗೂಳಿಯವರನ್ನು ಶುಕ್ರವಾರವಷ್ಟೇ ಬದಲಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಿಲೋಫರ್ ಬಾದಲ್ ಎಂಬುವರನ್ನು ಆಯ್ಕೆ ಮಾಡಲಾಗಿತ್ತು.
ವಿರೋಧದ ಮಧ್ಯೆಯೂ ಪತ್ನಿಯ ಸ್ಥಾನಕ್ಕೆ ನಿಲೋಫರ್ ಬಾದಲ್‌ರನ್ನು ಆಯ್ಕೆ ಮಾಡಿದ್ದಕ್ಕೆ ಮಂಜುಳಾ ಅವರ ಪತಿ, ಪಿಯು ಉಪನ್ಯಾಸಕನಾಗಿರುವ ಶಂಕರ್ ಗೂಳಿ ಆಕ್ರೋಶಗೊಂಡಿದ್ದ. ಹೀಗಾಗಿ, ಶಂಕರ್ ಗೂಳಿ ರೌಡಿಶೀಟರ್ ಬಾಪುಗೌಡ ಅಗತೀರ್ಥ ಎಂಬಾತನ ಜೊತೆಗೂಡಿ ಶನಿವಾರ ಬೆಳಗಿನ ಜಾವ ನಗರದ ಕನಕದಾಸ ವೃತ್ತದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ ಕಟ್ಟಡದ ಬಾಗಿಲು ಮತ್ತು ಕಿಟಕಿಗೆ ಪೆಟ್ರೋಲ್ ಸುರುವಿ, ಬೆಂಕಿಯಿಟ್ಟಿದ್ದಾನೆ.
ಘಟನೆಯಿಂದಾಗಿ ಕಚೇರಿಯ ಕಿಟಕಿ, ಬಾಗಿಲು, ಎಸಿ, ಸೋಫಾ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ರಾತ್ರಿ ವೇಳೆ ಬೆಂಕಿ ಹಚ್ಚಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆರೋಪಿ ಶಂಕರ್ ಗೂಳಿ ಎಂಬಾತನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ನೆರವಾದ ಮತ್ತೊಬ್ಬನಿಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ.