ತುಮಕೂರು : ತುಮಕೂರಲ್ಲಿ ಘೋರ ದುರಂತ ನಡೆದಿದ್ದು, ಮನೆ ಹತ್ತಿರ ಆಟವಾಡುತ್ತಿದ್ದ 6 ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ಹಿಂಡೊಂದು ತಲೆಯ ಚರ್ಮ ಹಾಗೂ ಕರುಳಿನ ಭಾಗ ಹೊರಗೆ ಬರುವಂತೆ ದಾಳಿ ನಡೆಸಿದ್ದು, 6 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಅಯ್ಯನಬಾವಿ ಗ್ರಾಮದಲ್ಲಿ ನಡೆದಿದೆ.
ಅಯ್ಯನಬಾವಿ ನಿವಾಸಿ ದಿವ್ಯಾ (6) ಮೃತ ಮಗು ಎಂದು ತಿಳಿದುಬಂದಿದೆ. ಮಹಲಿಂಗಯ್ಯ ಅವರ ಮಗಳು ಎಂದಿನಂತೆ ಮನೆ ಹತ್ತಿರ ಆಟವಾಡುತ್ತಿದ್ದ ಸಮಯದಲ್ಲಿ ನಾಯಿಗಳ ಹಿಂಡು ಏಕಾಏಕಿ ದಾಳಿ ನಡೆಸಿದ್ದು, ಮಗುವನ್ನು ಕಿತ್ತು ತಿನ್ನಲು ಯತ್ನಿಸಿವೆ. ಪರಿಣಾಮ ಮಗುವಿನ ತಲೆಯ ಚರ್ಮ, ಹೊಟ್ಟೆಯಲ್ಲಿನ ಕರಳು ಆಚೆ ಬಂದಿವೆ. ಮಗುವಿನ ಮುಖ, ಕೈ, ಕಾಲು ತೊಡೆ ಭಾಗಗಳನ್ನ ನಾಯಿಗಳು ಕಿತ್ತು ಹಾಕಿವೆ.
ರಕ್ತದ ಮಡುವಿನಲ್ಲಿ ಬಿದ್ದು ಚೀರಾಡುತ್ತಿದ್ದ ಮಗುವನ್ನ ಕಂಡ ಸಾರ್ವಜನಿಕರು ನಾಯಿಗಳ ಹಿಂಡನ್ನು ಓಡಿಸಿ ಕೂಡಲೇ ತಿಪಟೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.