ಚಿಕ್ಕಬಳ್ಳಾಪುರ : ತಾನು ಪ್ರೀತಿಸುತ್ತಿದ್ದ ಸೋದರ ಮಾವನ ಮಗಳ ಜೊತೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮಂಜುನಾಥ್(27) ಎಂದು ತಿಳಿದುಬಂದಿದೆ.
ಮಾವನ ಮಗಳಿಗೆ ಇನ್ನೂ ಮದುವೆ ವಯಸ್ಸು ಆಗಿಲ್ಲ. ಮತ್ತೊಂದೆಡೆ ಮಂಜುನಾಥ್ ಗೆ ಮದುವೆ ಮಾಡುವ ವಯಸ್ಸು. ಹೀಗಾಗಿ ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡುತ್ತೇವೆಂದು ಮಾವನ ಮನೆ ಕಡೆಯವರು ಹೇಳಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಮೃತ ಮಂಜುನಾಥ್, ಅಪ್ರಾಪ್ತೆಯಾಗಿದ್ದ ಸೋದರ ಮಾವನ ಮಗಳನ್ನು ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲ ಆಕೆಯನ್ನು ಮದುವೆಯಾಗಬೇಕೆಂದು ಕನಸು ಕಂಡಿದ್ದ. ಆದ್ರೆ, ಇದಕ್ಕೆ ಹುಡುಗಿ ತಂದೆ (ಅಂದರೆ ಮಂಜುನಾಥ್ ಸೋದರಮಾವ) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಮಂಜುನಾಥ್ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.