ಮೈಸೂರು : ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸೊಸೆಗೆ ಮಕ್ಕಳು ಆಗಿಲ್ಲ ಎಂಬ ಕಾರಣಕ್ಕೆ ಕಲ್ಲಿನಿಂದ ಜಜ್ಜಿ ಅತ್ತೆ ಸೊಸೆಯನ್ನು ಭೀಕರವಾಗಿ ಕೊಲೆ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ಗೃಹಿಣಿ ಒಬ್ಬರು ಮಕ್ಕಳಾಗದಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ನಂಜನಗೂಡು ತಾಲ್ಲೂಕಿನ ಕರಳಪುರದಲ್ಲಿ ಶ್ರೀಕಾಂತ ಅವರ ಮಡದಿ ಮಹಾದೇವಿ (25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.4 ವರ್ಷಗಳ ಹಿಂದೆ ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದ ಮಹದೇವ ಶೆಟ್ಟಿ ಅವರ ಮಗಳು ಮಹಾದೇವಿಯನ್ನು ಕರಳಪುರ ಗ್ರಾಮದ ದೇವಶೆಟ್ಟಿ ಅವರ ಮಗ ಶ್ರೀಕಾಂತನೊಡನೆ ವಿವಾಹವಾಗಿತ್ತು.
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಸುನಿಲ್‌ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.