ಗುರುವಾರ ಮುಂಜಾನೆ ಸ್ಯಾನ್ ಡಿಯಾಗೋ ಪ್ರದೇಶದಲ್ಲಿ ಖಾಸಗಿ ವಿಮಾನ ಪತನವಾಗಿದ್ದು ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿಮಾನವು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಪತನಗೊಂಡಿತು. ಅಧಿಕಾರಿಗಳು ಇದನ್ನು ದೃಢೀಕರಿಸುತ್ತಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಸಹಾಯಕ ಅಗ್ನಿಶಾಮಕ ಇಲಾಖೆಯ ಮುಖ್ಯಸ್ಥ ಡ್ಯಾನ್ ಎಡ್ಡಿ ಹೇಳಿದ್ದಾರೆ.
ಈ ವಿಮಾನವು ಎಂಟರಿಂದ ಹತ್ತು ಜನರನ್ನು ಹೊತ್ತೊಯ್ಯಬಲ್ಲದು. ಅಪಘಾತದ ಸಮಯದಲ್ಲಿ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಸ್ಯಾನ್ ಡಿಯಾಗೋ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಕೂಡ ಅದನ್ನೇ ಹೇಳುತ್ತಿದ್ದಾರೆ. ಅಪಘಾತದ ಸುತ್ತಮುತ್ತಲ ಪ್ರದೇಶದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ.
ಅಪಘಾತದಲ್ಲಿ ಕಾರುಗಳು ಸುಟ್ಟು ಕರಕಲಾಗಿವೆ. ಸುಮಾರು 15 ಮನೆಗಳು ನಾಶವಾಗಿವೆ. “ಆ ವಿಮಾನ ಅಪಘಾತಕ್ಕೀಡಾದಾಗಿನಿಂದ ಎಲ್ಲೆಡೆ ಜೆಟ್ ಇಂಧನವಿದೆ” ಎಂದು ಎಡ್ಡಿ ಹೇಳಿದರು. ಮನೆಗಳನ್ನು ಪರಿಶೀಲಿಸುವ ಮತ್ತು ಅವಶೇಷಗಳಲ್ಲಿ ಸಿಲುಕಿರುವವರನ್ನು ಹೊರತರುವತ್ತ ಗಮನಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ವಿಮಾನ ಅಪಘಾತಕ್ಕೀಡಾದ ಸಮಯದಲ್ಲಿ ಬಹಳಷ್ಟು ಮಂಜು ಇತ್ತು ಎಂದು ಎಡ್ಡಿ ಹೇಳಿದರು.