ಶಿವಮೊಗ್ಗ: ಜಿಲ್ಲೆಯ ಸೊರಬದಲ್ಲಿ ಕಳೆದ ನಾಲ್ಕು ದಶಕಗಳ ನಂತರ ಇಸ್ಪೀಟ್ ಕ್ಲಬ್ ಪ್ರಾರಂಭವಾಗಿದೆ. ಊರಿಗೆ ಬುದ್ಧಿ ಹೇಳುವ ಜಾಗದಲ್ಲಿರುವ ಶಿಕ್ಷಣ ಸಚಿವರ ಕ್ಷೇತ್ರದಲ್ಲಿಯೇ ಇಸ್ಪೀಟ್ ಕ್ಲಬ್ ನಡೆಯುತ್ತಿದೆ. ತಮ್ಮ ತಂದೆ ಎಸ್.ಬಂಗಾರಪ್ಪ ಹೆಸರು ಉಳಿಸುವ ಉದ್ದೇಶವಿದ್ದರೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮೊದಲು ಇಸ್ಪೀಟ್ ಕ್ಲಬ್ ಬಂದ್ ಮಾಡಿಸಲಿ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ವಾಗ್ಧಾಳಿ ನಡೆಸಿದ್ದಾರೆ.
ಇಂದು ಸಾಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರ ಕಾಲದಲ್ಲಿ, ಅವರ ಅಣ್ಣ ಕುಮಾರ ಬಂಗಾರಪ್ಪ ಸಚಿವರಾಗಿದ್ದ ಸಂದರ್ಭದಲ್ಲಿ ಸೊರಬದಲ್ಲಿ ಇಸ್ಪೀಟ್ ಕ್ಲಬ್‌ನಂತಹ ಜೂಜಾಟಕ್ಕೆ ಅವಕಾಶ ಇರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸಮಗ್ರ ಅಭಿವೃದ್ದಿ ಬಗ್ಗೆ ಕಿಂಚಿತ್ ಗಮನ ಹರಿಸದೆ ಇರುವುದೇ ಸಚಿವರ ಎರಡು ವರ್ಷದ ಸಚಿವರ ಸಾಧನೆಯಾಗಿದೆ ಎಂದು ಹೇಳಿದರು.
ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಎರಡು ವರ್ಷದಲ್ಲಿ ರೈತರ ಮೇಲಿನ ಶೋಷಣೆ ಹೊರತುಪಡಿಸಿದರೆ ಯಾವುದೇ ಅಭಿವೃದ್ದಿ ಕೆಲಸಕ್ಕೆ ಒತ್ತು ನೀಡಿಲ್ಲ. ಮಡಸೂರಿನ 7 ರೈತರನ್ನು 13 ದಿನ ಜೈಲಿಗೆ ಕಳಿಸಿದ್ದು, ಹೆನಗೆರೆ ಬಡ ಬ್ರಾಹ್ಮಣ ರೈತ ಕುಟುಂಬದ ಮೇಲೆ ಹಲ್ಲೆ, ಇರುವಕ್ಕಿ ಮೂರು ಬಡ ಬ್ರಾಹ್ಮಣ ಕುಟುಂಬವನ್ನು ಒಕ್ಕಲೆಬ್ಬಿಸಿದ್ದು, ಹೊಸನಗರದಲ್ಲಿ ಎಸ್.ಸಿ. ಮಹಿಳೆ ರುಕ್ಮೀಣಿ ರಾಜು ಎಂಬುವವರ ಶುಂಠಿ ತೋಟ ನಾಶ ಮಾಡಿದ್ದು, ಕೋಟೆಕೊಪ್ಪದಲ್ಲಿ ಮಡಿವಾಳ ಕುಟುಂಬವನ್ನು ಒಕ್ಕಲೆಬ್ಬಿಸಿದ್ದು, ನೆಲ್ಲಿಬೀಡು ಜೈನ ಸಮುದಾಯದ ನವೀನ್ ಜೈನ್ ಎಂಬುವವರ ಬೇಲಿ ತೆರವು, ಆವಿನಹಳ್ಳಿ ಕೇಶವ ಜೋಗಿ ಎಂಬುವವರ ಜಮೀನನ್ನು ಹಮೀದ್ ಎಂಬಾತ ಅತಿಕ್ರಮಿಸಿದ್ದು, ಹೀಗೆ ಸಾಲುಸಾಲು ರೈತ ಶೋಷಣೆ ನಡೆಸಿದ ದೊಡ್ಡಪಟ್ಟಿಯೇ ಸಾಗರ ಕ್ಷೇತ್ರದ ಶಾಸಕರ ಎರಡು ವರ್ಷದ ಸಾಧನೆಯಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಶಾಸಕ ಗೋಪಾಲಕೃಷ್ಣ ಬೇಳೂರಿಗೆ ಸಂಸದ ಬಿ.ವೈ.ರಾಘವೇಂದ್ರ ಬಸ್ ಸ್ಟಾಂಡ್ ಮಾಡಿದ್ದು ಮಾತ್ರ ಕಾಣುತ್ತದೆ. ಆದರೆ ಸಂಸದರು ಮಾಡಿರುವ ವಿಮಾನ ನಿಲ್ದಾಣ, ತುಮರಿ ಸೇತುವೆ, ಜಿಲ್ಲಾದ್ಯಂತ ನಿರ್ಮಾಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಮಗಾರಿಗಳು ಬಹುಶ್ಯಃ ಅವರ ಕಣ್ಣಿಗೆ ಕಾಣುತ್ತಿಲ್ಲ. ಜಿಲ್ಲೆಗೆ ಅತಿ ಹೆಚ್ಚು ಹಣವನ್ನು ಕೇಂದ್ರ ಸರ್ಕಾರದಿಂದ ತಂದು ರಾಘವೇಂದ್ರ ಅವರು ನಿರಂತರವಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ನಾಗರದ ಶಾಸಕರು, ಎರಡು ವರ್ಷದಿಂದ ಹಸಿರುಮಕ್ಕಿ ಸೇತುವೆ ಕಾಮಗಾರಿ ಯಾಕೆ ಮುಂದುವರೆದಿಲ್ಲ.? ನಾನು ಶಾಸಕನಾಗಿದ್ದಾಗ ತಾಂತ್ರಿಕ ಕಾರಣದಿಂದ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆಗದೆ 11 ಕೋಟಿ ರೂ. ಹಣ ಮಂಜೂರು ಮಾಡಿಸಲಾಗಿತ್ತು. ನಂತರ ಈಗ ಶಾಸಕರು ಕಾಮಗಾರಿ ವಿಳಂಬಕ್ಕೆ ಕಾರಣ ಮೊದಲು ಜನತೆಗೆ ತಿಳಿಸಲಿ ಎಂದು ಆಗ್ರಹಿಸಿದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಎಲ್ಲರೂ ಎಡವಿದ್ದಾರೆ. ಬಂಗಾರಪ್ಪ ಮುಖ್ಯಮಂತ್ರಿಯಾಗಿ, ಕಾಗೋಡು ಸಚಿವರಾಗಿ, ಬೇಳೂರು ಮೂರನೇ ಬಾರಿ ಶಾಸಕರಾಗಿ ಹಕ್ಕುಪತ್ರ ಏಕೆ ಕೊಡಿಸಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವುದು ನನ್ನ ಆದ್ಯತಾ ವಿಷಯ. ಇದಕ್ಕಾಗಿ ದೆಹಲಿಗೆ ಹೋಗಿ ಸಚಿವರ ಮೇಲೆ ಒತ್ತಡ ತರಲಾಗಿದೆ. ಬೇಳೂರು ಎಷ್ಟು ಬಾರಿ ದೆಹಲಿಗೆ ಹೋಗಿದ್ದಾರೆ? ಅಷ್ಟಕ್ಕೂ ಮಧು ಬಂಗಾರಪ್ಪ, ಗೋಪಾಲಕೃಷ್ಣ ಬೇಳೂರಿಗೆ ಶರಾವತಿ ಮುಳುಗಡೆ ಸಂತ್ರಸ್ತರ ಬಗ್ಗೆ ಸರಿಯಾದ ವಿಷಯವೇ ಗೊತ್ತಿಲ್ಲ. ಸಮಸ್ಯೆಯನ್ನೇ ಪ್ರಚಾರಕ್ಕಾಗಿ ಬಳಸಿಕೊಳ್ಳುವುದು ಒಳ್ಳೆಯದಲ್ಲ. ಅದರ ಪರಿಹಾರಕ್ಕೆ ಮೊದಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ದೇವೇಂದ್ರಪ್ಪ, ಸಾಗರ ನಗರ ಮಂಡಲದ ಅಧ್ಯಕ್ಷ ಗಣೇಶ್ ಪ್ರಸಾದ್, ನಿಕಟಪೂರ್ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ, ರಮೇಶ್ ಎಚ್.ಎಸ್, ಗಿರೀಶ್ ಗುಳ್ಳಳ್ಳಿ, ಸತೀಶ್ ಕೆ, ಸುಜಯ್ ಶೆಣೈ, ಜನಾರ್ದನ್ ಇನ್ನಿತರರು ಹಾಜರಿದ್ದರು.
ಮೇ.26ರಿಂದ SSLC ಪರೀಕ್ಷೆ-2 ಆರಂಭ: KSRTC ಬಸ್ಸಿನಲ್ಲಿ ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಅವಕಾಶ
GOOD NEWS: ರಾಜ್ಯದ ‘ಕ್ಯಾನ್ಸರ್ ರೋಗಿ’ಗಳಿಗೆ ಗುಡ್ ನ್ಯೂಸ್: 16 ಜಿಲ್ಲಾಸ್ಪತ್ರೆಗಳಲ್ಲಿ ‘ಕೀಮೋಥೆರಪಿ ಕೇಂದ್ರ’ ಆರಂಭ
SHOCKING: ಯುವಕರನ್ನೇ ಹೆಚ್ಚಾಗಿ ಕಾಯುತ್ತಿದೆ ಹೃದಯಾಘಾತ: ರಾಜ್ಯದಲ್ಲಿ ‘ಹಾರ್ಟ್ ಅಟ್ಯಾಕ್’ಗೆ ಒಂದೇ ದಿನ ಮೂವರು ಬಲಿ