ಮೈಸೂರು : ಮೈಸೂರಿನಲ್ಲಿ ಯುವತಿಯ ಮೃತದೇಹ ಮತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರಬಹುದು ಎಂದು ಇದೀಗ ಯುವತಿಯ ಸಂಬಂಧಿ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ಯುವತಿಯ ಸೋದರ ಮಾವನ ಮಗ ವೆಂಕಟೇಶ್ ಈ ಕುರಿತು ಗಂಭೀರವಾದ ಆರೋಪ ಮಾಡಿದ್ದಾರೆ.
ಸ್ಥಳದಲ್ಲಿ ಶವ ನೋಡಿದಾಗ ಕೊಲೆ ಆಗಿರಬಹುದು ಎಂದು ತಿಳಿದಿದ್ದೆವು. ಆದರೆ ಮೃತದೇಹದ ಮೇಲೆ ಪ್ಯಾಂಟ್ ಉಲ್ಟಾ ಹಾಕಲಾಗಿತ್ತು. ಅಂದರೆ ಅತ್ಯಾಚಾರದ ನಂತರ ಕೊಲೆ ಮಾಡಿ ಬಟ್ಟೆ ತೊಡಿಸಿರಬಹುದು. ಕಳೆದ ಮೂರು ವರ್ಷಗಳಿಂದ ಡೇಕೇರ್ ಸೆಂಟರ್ ನಲ್ಲಿ ಯುವತಿ ಕೆಲಸ ಮಾಡುತ್ತಿದ್ದಳು. ನಿನ್ನೆ ಕೆ.ಆರ್ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಯುವತಿ ಡೇಕೇರ್ ನಿಂದ ತೆರಳಿದ್ದಳು.
ಆಸ್ಪತ್ರೆಗೆ ಹೊರಡುವ ಮುನ್ನ ತಂದೆಗೆ ಯುವತಿ ಕರೆ ಮಾಡಿದ್ದಾಳೆ. ಮಳೆ ಬರುತ್ತಿದೆ ಆಟೋದಲ್ಲಿ ಹೋಗುವಂತೆ ತಂದೆ ತಿಳಿಸಿದ್ದರು. ಆದರೆ ಬೆಳಿಗ್ಗೆ ಕುತ್ತಿಗೆಗೆ ವೇಲ್ನಿಂದ ಬಿಗಿದು ಹತ್ಯೆ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಯಾರೋ ಅತ್ಯಾಚಾರ ಎಸಗಿ ಯುವತಿಯನ್ನು ಕೊಲೆ ಮಾಡಿದ್ದಾರೆ. ಬಡವರ ಹೆಣ್ಣುಮಕ್ಕಳಿಗೆ ಇಂಥ ದುಸ್ಥಿತಿ ಬರುತ್ತಿದೆ ಎಂದು ವೆಂಕಟೇಶ್ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಹಂತಕರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಮೈಸೂರಿನ ಶವಗಾರದಲ್ಲಿ ಸೋದರ ಮಾವನ ಮಗವೆಂಕಟೇಶ್ ಹೇಳಿಕೆ ನೀಡಿದರು.