ನವದೆಹಲಿ: ಆಪರೇಷನ್ ಸಿಂಧೂರ್ ಕುರಿತು ವಿವಾದಾತ್ಮಕ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಿ ಖಾನ್ ಮಹಮದಾಬಾದ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ನೀಡಿದೆ. ಆದರೆ ಪ್ರಕರಣದ ತನಿಖೆಗೆ ತಡೆ ನೀಡಲು ನಿರಾಕರಿಸಿದೆ.
ಮಧ್ಯಂತರ ಪರಿಹಾರವನ್ನು ನೀಡುವಾಗ, ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಎನ್.ಕೆ.ಸಿಂಗ್ ಅವರ ನ್ಯಾಯಪೀಠವು ಪ್ರೊಫೆಸರ್ ಅವರ ಹೇಳಿಕೆಯ ಸಮಯದ ಬಗ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿತು.
ಮಹಮದಾಬಾದ್ ಅವರನ್ನು ಮೇ 18 ರಂದು ಬಂಧಿಸಲಾಗಿದ್ದು, ಹರಿಯಾಣ ನ್ಯಾಯಾಲಯವು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಹೆಚ್ಚಿನ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) 24 ಗಂಟೆಗಳ ಒಳಗೆ ರಚಿಸುವಂತೆ ನ್ಯಾಯಾಲಯವು ಹರಿಯಾಣದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದಾಗ್ಯೂ, ಅಧಿಕಾರಿಗಳು ಹರಿಯಾಣ ಅಥವಾ ದೆಹಲಿಯವರಾಗಬಾರದು ಮತ್ತು ಒಬ್ಬರು ಮಹಿಳೆಯಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.