ನವದೆಹಲಿ: ರಾಜಧಾನಿ ಎಕ್ಸ್ಪ್ರೆಸ್ ಸೇರಿದಂತೆ ರೈಲುಗಳನ್ನು ಹಳಿ ತಪ್ಪಿಸುವ ಶಂಕಿತ ಪ್ರಯತ್ನಗಳನ್ನು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ರೈಲು ಚಾಲಕರ ಜಾಗರೂಕತೆಯಿಂದ ಸ್ವಲ್ಪದರಲ್ಲೇ ತಪ್ಪಿಸಲಾಗಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ.
ಅಧಿಕಾರಿಗಳ ಪ್ರಕಾರ, ಸೋಮವಾರ ಸಂಜೆ ದಲೇಲ್ನಗರ್ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವೆ ಕಿಲೋಮೀಟರ್ ಮಾರ್ಕರ್ 1129/14 ಬಳಿ ಈ ಘಟನೆಗಳು ನಡೆದಿವೆ.
ಅಪರಿಚಿತ ವ್ಯಕ್ತಿಗಳು ಅರ್ಥಿಂಗ್ ವೈರ್ ಬಳಸಿ ರೈಲ್ವೆ ಹಳಿಗಳಿಗೆ ಮರದ ತುಂಡುಗಳನ್ನು ಕಟ್ಟಿದ್ದಾರೆ, ಇದು ಹಾದುಹೋಗುವ ರೈಲುಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಲಾಗಿದೆ.
ದೆಹಲಿಯಿಂದ ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿದ್ದ 20504 ರಾಜಧಾನಿ ಎಕ್ಸ್ಪ್ರೆಸ್ನ ಲೋಕೋ ಪೈಲಟ್ ಮೊದಲ ಅಡಚಣೆಯನ್ನು ಗುರುತಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಚಾಲಕ ತುರ್ತು ಬ್ರೇಕ್ ಹಾಕಿ, ರೈಲನ್ನು ನಿಲ್ಲಿಸಿ, ಅಡಚಣೆಯನ್ನು ತೆಗೆದುಹಾಕಿ, ರೈಲ್ವೆ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಇದಾದ ಸ್ವಲ್ಪ ಸಮಯದ ನಂತರ, ರಾಜಧಾನಿಯನ್ನು ಹಿಂಬಾಲಿಸುತ್ತಿದ್ದ 15044 ಕಥ್ಗೊಡಮ್ ಎಕ್ಸ್ಪ್ರೆಸ್ ಅನ್ನು ಹಳಿ ತಪ್ಪಿಸಲು ಇದೇ ರೀತಿಯ ಪ್ರಯತ್ನವನ್ನು ಮಾಡಲಾಯಿತು.
ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ), ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ಪಿಟಿಐಗೆ ತಿಳಿಸಿದ್ದಾರೆ