ಮಂಡ್ಯ : ಇತ್ತೀಚಿಗೆ ಬಿಡದಿಯ ಭದ್ರಾಪುರದಲ್ಲಿ ದಿವ್ಯಾಂಗ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ನಿನ್ನೆ FSL ವರದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೆ ಮಂಡ್ಯ ಜಿಲ್ಲೆಯಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಅಪ್ರಾಪ್ತ ಬಾಲಕನೊಬ್ಬ ಅತ್ಯಾಚಾರ ಎಸಗಿ ಜಾತಿನಿಂದನೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕರಿಕ್ಯಾತನಹಳ್ಳಿಯಲ್ಲಿ ಕಳೆದ ಶುಕ್ರವಾರ ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ 19 ವರ್ಷದ ಬುದ್ಧಿಮಾಂದ್ಯ ಯುವತಿ ಮನೆಯವರು ಕಾರ್ಯನಿಮಿತ್ತ ಬೇರೊಂದು ಗ್ರಾಮಕ್ಕೆ ತೆರಳಿದ್ಧ ವೇಳೆ ಮೆಣಸಿನಕಾಯಿ ಕೇಳುವ ನೆಪದಲ್ಲಿ ಯುವತಿ ಮನೆಗೆ ಬಂದ ಅದೇ ಗ್ರಾಮದ 17 ವರ್ಷದ ಅಪ್ರಾಪ್ತನು ಯುವತಿ ಬಾಯಿಗೆ ಬಟ್ಟೆ ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಯುವತಿ ಚೀರಾಟ ಕೇಳಿದ ಪಕ್ಕದ ಮನೆಯಲ್ಲಿದ್ದ ಯುವತಿಯ ಅಜ್ಜಿ ಬಂದು ನೋಡಲಾಗಿ ನಗ್ನಾವಸ್ಥೆಯಲ್ಲಿದ್ದ ಬಾಲಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು. ದೌರ್ಜನ್ಯ ತಡೆಯಲು ಬಂದ ಅಜ್ಜಿ ಮೇಲೆ ಬಾಲಕ ಹಲ್ಲೆ ನಡೆಸಿದ್ದಲ್ಲದೇ ಜಾತಿನಿಂದನೆ ಮಾಡಿದ್ದಾನೆಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ದೌರ್ಜನ್ಯಕ್ಕೊಳಗಾದ ಯುವತಿಯ ಪೋಷಕರು ನೀಡಿದ ದೂರಿನನ್ವಯ ಶುಕ್ರವಾರ ರಾತ್ರಿಯೇ ಡಿವೈಎಸ್‌ಪಿ ಬಿ.ಚಲುವರಾಜು, ಸಿಪಿಐ ನಿರಂಜನ್ ಹಾಗೂ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ರಾಜೇಂದ್ರ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಅಪ್ರಾಪ್ತನ ವಿರುದ್ಧ ಶುಕ್ರವಾರ ತಡರಾತ್ರಿ ಲೈಂಗಿಕ ದೌರ್ಜನ್ಯ ಮತ್ತು ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಬಳಿಕ ಪೊಲೀಸರು ಜಡ್ಜ್ ಮುಂದೆ ಬಾಲಕನನ್ನು ಹಾಜರುಪಡಿಸಿ ಬಾಲಕರ ಮಂದಿರಕ್ಕೆ ಕಳುಹಿಸಲಾಗಿದೆ.