ಮೈಸೂರು : ಇತ್ತೀಚಿಗೆ ತಾನೆ ಶಾಸಕ ಕೆಎಂ ಶಿವಲಿಂಗೇಗೌಡ, ಮಂತ್ರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಾಮಿಸ್ ಮಾಡಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ನನ್ನನ್ನು ಕರೆಸಿಕೊಂಡರು. ಹಾಗಾಗಿ ಮುಂದಿನ ದಿನಗಳಲ್ಲಿ ನನಗೆ ಸಚಿವ ಸ್ಥಾನ ನೀಡುವ ನಂಬಿಕೆ ಇದೆ ಎಂದು ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೆ ಇದೀಗ ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ವಿಧಾನಸಭೆಯ ಉಪ ಸಭಾಪತಿ ರುದ್ರಪ್ಪ ಲವಾಣಿ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವನಾಗಲು ನನಗೂ ಆಸೆ ಇದೆ ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಕಳೆದ ಬಾರಿ ಸಂಪುಟ ರಚನೆ ವೇಳೆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಅಂತಿಮ ಕ್ಷಣದಲ್ಲಿ ನನ್ನ ಹೆಸರನ್ನು ಬದಲಿಸಲಾಯಿತು ಎಂದು ತಿಳಿಸಿದರು.
ಪಕ್ಷದ ನಾಯಕರು ಮನೋವೋಲಿಸಿ ಉಪ ಸಭಾಪತಿ ಸ್ಥಾನ ನೀಡಿದರು. ನಮ್ಮ ಸಮುದಾಯ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಹೀಗಾಗಿ ಸಚಿವ ಸ್ಥಾನ ನನಗೆ ನೀಡುತ್ತಾರೆ ಎನ್ನುವ ಭರವಸೆ ಇದೆ. ಎಲ್ಲರಿಗೂ ಆಸೆ ಇರುವಂತೆ ನನಗೂ ಸಚಿವನಾಗುವ ಆಸೆ ಇದೆ ಎಂದು ಮೈಸೂರಿನಲ್ಲಿ ವಿಧಾನಸಭೆಯ ಉಪ ಸಭಾಪತಿ ರುದ್ರಪ್ಪ ಲವಾಣಿ ಹೇಳಿಕೆ ನೀಡಿದರು.