ಬಾಗಲಕೋಟೆ : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ಮೂಲಕ ದಾಳಿ ಮಾಡಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಇದೇ ವಿಚಾರವಾಗಿ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೋದಿಯವರು ಬರೀ ಭಾಷಣ ಮಾಡಿದರೆ ನಡೆಯಲ್ಲ, ಕದನ ವಿರಾಮದ ಬಗ್ಗೆ ಉತ್ತರ ನೀಡಬೇಕು.ಪಾಕಿಸ್ತಾನಕ್ಕೆ ಯಾವ ಪಾಠ ಕಲಿಸಲು ಹೊರಟಿದ್ದೇವೆ. ಅದನ್ನು ಕಲಿಸಿದ್ವಾ? ನಾಲ್ಕೈದು ದಿನ ಯುದ್ಧ ಮಾಡಿ ಬಿಟ್ಟರೆ, ಇದು ಸರಿಯಾ? ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂದು ಹೊರಟು, ಈಗ ಕದನ ವಿರಾಮ ಘೋಷಿಸಿದ್ದು ಸರಿನಾ? ಅಮೆರಿಕ ಹೇಳಿದೆ ಎಂದು ಕದನ ವಿರಾಮ ಘೋಷಣೆ ಮಾಡಿದ್ರಾ? ಅಮೆರಿಕ ನಮ್ಮ ಆಂತರಿಕ ವಿಷಯಗಳ ಬಗ್ಗೆ ತೀರ್ಮಾನ ಮಾಡುವುದಾದರೆ ನಮ್ಮ ಸಾರ್ವಭೌಮತ್ವದ ಬಗ್ಗೆ ಏನು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ಕೊಟ್ಟಿದ್ದೇವೆ. ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವ ಕಾರಣಕ್ಕೆ ಬೆಂಬಲ ಕೊಟ್ಟಿದ್ದೆವು. ಆದರೆ ಕದನ ವಿರಾಮ ಘೋಷಣೆ ಮಾಡುವಾಗ ಯಾವ ಉದ್ದೇಶದಿಂದ, ಯಾವ ಗುರಿ ಇಟ್ಟುಕೊಂಡು ಕದನ ಮಾಡಿದ್ದೇವೆ ಆ ಗುರಿ ಈಡೇರಿದೆಯಾ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಶ್ಮೀರ ವಿಷಯವನ್ನು ನಾವು ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ ಅಂದರೆ ಇದಕ್ಕಿಂತ ಭಾರತಕ್ಕೆ ದೊಡ್ಡ ಹಿನ್ನಡೆ ಮತ್ತೊಂದಿಲ್ಲ. ಕಾಶ್ಮೀರ ವಿಷಯ ಸೆಟಲ್ ಆಗಿದಿಯಾ ಅಥವಾ ರೀ ಓಪನ್ ಆಗಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಇವತ್ತು ಉತ್ತರ ಇಲ್ಲದಂತಾಗಿದೆ. ಬರೀ ಭಾಷಣ ಮಾಡಿದರೆ ಉತ್ತರ ಸಿಗಲ್ಲ. ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.