ಧಾರವಾಡ : ಬೇಸಿಗೆ ಶುರುವಾದರೆ ಸಾಕು ಮಾವಿನ ಹಣ್ಣಿನದೇ ದರ್ಬಾರ್, ಇತ್ತೀಚಿನ ದಿನಗಳಲ್ಲಿ ಅಂತೂ ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಮಾವಿನ ಹಣ್ಣಿನಿಂದ ತರ ತರದಲ್ಲಿ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ 1 ಬಾಕ್ಸ್ ಮಾವಿನ ಹಣ್ಣಿಗೆ 300, 350 ಅಥವಾ 400 ರೂ. ಇರುತ್ತದೆ. ಆದರೆ ಇಲ್ಲೊಂದು ಮಾವಿನ ಹಣ್ಣಿನ ಕೆಜಿಗೆ ಬರೋಬ್ಬರಿ 2.7 ಲಕ್ಷ ರೂ. ಆಗಿದ್ದು, 1 ಮಾವಿನ ಹಣ್ಣಿಗೆ 10 ಸಾವಿರ ರೂ. ಬೆಲೆಯಿದೆ.
ಹೌದು ಈ ಮಾವಿನ ಹಣ್ಣಿನ ಹೆಸರು ಮಿಯಾ ಜಾಕಿ, ಇದು ಜಪಾನ್ ದೇಶದ ಮಾವಿನ ಹಣ್ಣಿನತಳಿಯಾಗಿದೆ. ಈ ಹಣ್ಣನ್ನು ಧಾರವಾಡದ ರೈತ ಪ್ರಮೋದ ಗಾಂವಕರ ಕಲಕೇರಿಯ ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ಪ್ರತಿವರ್ಷ ಏಳೆಂಟು ಹಣ್ಣು ಬಿಡುತ್ತಿದ್ದ ಮಿಯಾ ಜಾಕಿ ಮರಗಳು, ಈ ವರ್ಷ 25-26 ಹಣ್ಣುಗಳನ್ನು ಬಿಟ್ಟಿವೆ. ಧಾರವಾಡದಲ್ಲಿ ನಡೆದ ಮಾವಿನ ಮೇಳದಲ್ಲೂ ಈ ಮಿಯಾ ಜಾಕಿ ಮಾವಿನ ಹಣ್ಣು ಎಲ್ಲರ ಗಮನ ಸೆಳೆಯಿತು.
ಮಾವಿನ ಮೇಳದಲ್ಲಿ ಮಿಯಾ ಜಾಕಿ ಕಂಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಈ ಮಿಯಾ ಜಾಕಿ ಹಣ್ಣನ್ನು ಯಾವ ರೈತರೂ ಬೆಳೆಯುತ್ತಿಲ್ಲ. ಆ ಹಣ್ಣಿನ ಉತ್ಪಾದನೆ ಹೆಚ್ಚಾದರೆ ಅದರ ದರವೂ ಕಡಿಮೆಯಾಗುತ್ತದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಿಯಾ ಜಾಕಿ ಹಣ್ಣಿನ ತಳಿಯ ಸಸಿಗಳನ್ನು ತರಿಸಿ, ಇತರ ರೈತರೂ ಅದನ್ನು ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ. ಒಂದು ಹಣ್ಣಿಗೆ 10 ಸಾವಿರ ಎಂದರೆ ಅದು ದುಬಾರಿಯಾಗುತ್ತದೆ. ಆದ್ದರಿಂದ ಆ ಹಣ್ಣಿನ ಉತ್ಪಾದನೆ ಹೆಚ್ಚಳ ಮಾಡಬೇಕಿದೆ ಎಂದು ಹೇಳಿದರು.
ಏನಿದು ‘ಮಿಯಾ ಜಾಕಿ’?
ಮಿಯಾ ಜಾಕಿ ಎಂಬುದು ಜಪಾನ್ ದೇಶದ ಓರ್ವ ರೈತನ ಹೆಸರು. ಮಿಯಾ ಜಾಕಿ ಎಂಬ ರೈತ ಅಲ್ಲಿ ಈ ಮಾವಿನ ಹಣ್ಣು ಬೆಳೆದಿದ್ದ. ಹೀಗಾಗಿ ಆ ಹಣ್ಣಿಗೆ ಮಿಯಾಜಾಕಿ ಎಂಬ ರೈತನ ಹೆಸರಿಡಲಾಗಿದೆ ಎಂದು ಹೇಳಲಾಗುತ್ತಿದೆ. ಪ್ರಮೋದ್ ಅವರು ಜಪಾನ್‌ಗೆ ತೆರಳಿದ್ದ ವೇಳೆ ಅಲ್ಲಿಂದ ಈ ಹಣ್ಣಿನ ಎರಡು ಸಸಿಗಳನ್ನು ತಂದು, ತಮ್ಮ ತೋಟದಲ್ಲಿ ನೆಟ್ಟಿದ್ದರು.
ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡ ಎರಡೂ ಸಸಿಗಳು ಬೆಳೆದು ಇದೀಗ ಫಲ ಕೊಡಲಾರಂಭಿಸಿವೆ. ಪ್ರವೋದ್ ಗಾಂವಕರ ಅವರು ತಮ್ಮ ತೋಟದಲ್ಲಿ ಇಸ್ರೇಲ್, ಅಮೆರಿಕ, ಜಪಾನ್, ಇಟಲಿ, ಥೈಲ್ಯಾಂಡ್ ಸೇರಿ ವಿವಿಧ ದೇಶಗಳ ಸುಮಾರು 25 ಜಾತಿಯ ಮಾವಿನ ಹಣ್ಣಿನ ಸಸಿಗಳನ್ನು ಬೆಳೆದಿದ್ದಾರೆ. ಸದ್ಯ ಮಾವಿನ ಮೇಳದಲ್ಲಿ ಪ್ರಮೋದ್ ಗಾಂವಕರ ಅವರು ಬೆಳೆದ ಮಿಯಾಜಾಕಿ ಎಲ್ಲರ ಗಮನ ಸೆಳೆದಿದೆ.