ದಾವಣಗೆರೆ : ವಾಹನಗಳ ತಪಾಸಣೆ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಜಿಲ್ಲಾ ಸಶಸ್ತ್ರ ಮೀಸಲು ಪಡೆ (DRA) ಪೇದೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಹೆಬ್ಬಾಳು ಗ್ರಾಮದ ಟೋಲ್‌ಗೇಟ್ ಬಳಿ ಇಂದು ಸಂಭವಿಸಿದೆ.
ಮೃತ ಕಾನ್ಸ್ಟೇಬಲ್ ಬಾಗಲಕೋಟೆ ಜಿಲ್ಲೆಯ ಹಿಬ್ಬರಗಿ ಇಂಡಿ ಗ್ರಾಮದ ರಾಮಪ್ಪ ಪೂಜಾರಿ (33) ಎಂದು ತಿಳಿದುಬಂದಿದೆ.ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಪ್ಪ ಪೂಜಾರಿ ಅವರನ್ನು ಹೆಬ್ಬಾಳು ಟೋಲ್‌ಗೇಟ್ ಬಳಿ ಲೈನ್‌ಡಿಸಿಪ್ಲಿನ್ ಡ್ಯೂಟಿಗೆ ನಿಯೋಜಿಸಲಾಗಿತ್ತು.
ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಬರುತ್ತಿದ್ದ ಲಾರಿ ಎದುರಿಗೆ ನಿಲ್ಲಿಸಲು ಸೂಚನೆ ನೀಡಿದರು.ಆದರೆ, ಚಾಲಕ ಲಾರಿ ನಿಲ್ಲಿಸದೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಪೂಜಾರಿ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾದ ಲಾರಿ ಚಾಲಕನಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ. ಲಾರಿಯ ಸಂಖ್ಯೆ ಮತ್ತು ಚಾಲಕನ ಗುರುತನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಶೀಘ್ರದಲ್ಲಿ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.