ಬೆಂಗಳೂರು: ರಾಜ್ಯದಲ್ಲಿ ಅಂಧತ್ವ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಈ ಸಂಬಂಧ ರಾಜ್ಯಾಧ್ಯಂತ ಆಶಾಕಿರಣ ಯೋಜನೆ ವಿಸ್ತರಣೆ ಮಾಡಿದೆ.
ಅಂಧತ್ವ ಮುಕ್ತ ಕರ್ನಾಟಕ ನಿರ್ಮಾಣದತ್ತ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರವು ಮಹಾತ್ವಾಕಾಂಕ್ಷಿ ಆಶಾಕಿರಣ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಕಣ್ಣಿನ ಸಮಗ್ರ ತಪಾಸಣೆ, ಶಸ್ತ್ರಚಿಕಿತ್ಸೆ ಕನ್ನಡ ವಿತರಣೆ ಸೇವೆಯನ್ನು ಉಚಿತವಾಗಿ ನೀಡಲು ಆಶಾಕಿರಣ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಶಾಶ್ವತ ದೃಷ್ಟಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ, ಹಾವೇರಿ, ಕಲಬುರಗಿ ಸೇರಿ ಕೆಲವು ಜಿಲ್ಲೆಗಳಲ್ಲಿ ಯೋಜನೆ ಜಾರಿಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಉಳಿದ ಜಿಲ್ಲೆಗಳಲ್ಲಿಯೂ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಇದಕ್ಕಾಗಿ ₹13.30 ಕೋಟಿ ಮೊತ್ತವನ್ನು ಮೀಸಲಿರಿಸಲು ತೀರ್ಮಾನಿಸಿದೆ. ಈ ಮೂಲಕ ದೃಷ್ಟಿ ದೋಷ ಉಳ್ಳವರಿಗೆ ಉಚಿತವಾಗಿ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ಕನ್ನಡಕಗಳನ್ನು ವಿತರಿಸಲಾಗುತ್ತದೆ.