ಮಂಡ್ಯ: ಉಪಲೋಕಾಯುಕ್ತರವರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೇ 28 ರಿಂದ 31 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಲಿದ್ದಾರೆ. ಈ ಬಗ್ಗೆ ಗ್ರಾಮಗಳಲ್ಲೂ ಹೆಚ್ಚಿನ ಪ್ರಚಾರ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಸರ್ಕಾರ ನೀಡಿರುವ ಸೂಚನೆ ಹಾಗೂ ಆದೇಶಗಳನ್ವಯ ಕಾರ್ಯನಿರ್ವಹಿಸಿ ಕಾರಣಾಂತರಗಳಿಂದ ಯಾವುದಾದರೂ ಕಡತಗಳು ಹಾಗೂ ಸಾರ್ವಜನಿಕರ ಕೆಲಸ ಬಾಕಿ ಇದ್ದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಿ ಎಂದರು.
ಜಿಲ್ಲೆಯ ಎಲ್ಲಾ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಮೇ 28 ರಿಂದ 31 ರವರೆಗೆ ರಜೆ ಪಡೆಯಲು ಅವಕಾಶವಿಲ್ಲ ಹಾಗೂ ಕೇಂದ್ರ ಸ್ಥಾನದಲ್ಲಿ ಇರಬೇಕು ಎಂದ ಅವರು ಅಧಿಕಾರಿಗಳು ತಮ್ಮ ಕಚೇರಿಯ ಸಿಬ್ಬಂದಿಗಳಿಗೆ ಸಲಹೆ ಹಾಗೂ ಸೂಚನೆಗಳನ್ನು ನೀಡುವಂತೆ ತಿಳಿಸಿದರು.
ಜಿಲ್ಲೆಗೆ ಸಂಬಂಧಿಸಿದ ಸುಮಾರು 156 ದೂರು ಅರ್ಜಿಗಳಿಗೆ ಕ್ರಮ ಕೈಗೊಂಡು ಉತ್ತರ ನೀಡುವಂತೆ ನಿರ್ದೇಶನ ನೀಡಲಾಗಿದೆ. ಆಯಾ ಇಲಾಖೆ ಅವರು ಮಾಹಿತಿ ನೀಡಿ ಶೇ100 ರಷ್ಟು ಜಿಲ್ಲೆಯಲ್ಲಿ ಸಾಧನೆಯಾಗಬೇಕು. ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳ ಕಚೇರಿಯಿಂದ ಇಲಾಖಾವಾರು ಸಿಬ್ಬಂದಿಗಳನ್ನು ಸಹ ನಿಯೋಜಿಸಿದೆ ಎಂದರು.
ಡಾ: ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ ಹಾಗೂ ಸಾರ್ವಜನಿಕರಿಂದ ದೂರು ಸಹ ಸ್ವೀಕರಿಸಲಿದ್ದಾರೆ . ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆಯ ಆಸನದ ವ್ಯವಸ್ಥೆ, ಸಾರ್ವಜನಿಕರ ವಿವರಗಳು ನೊಂದಣಿ ಮಾಡಿಕೊಳ್ಳಲು, ಲೋಕಾಯುಕ್ತ ಪ್ರಕರಣಗಳ ವಿಚಾರಣೆ ನಡೆಯುವ ಸ್ಥಳದಲ್ಲಿ ಕಂಪ್ಯೂಟರ್, ಕಂಪ್ಯೂಟರ್ ಆಪರೇಟರ್ಗಳು, ಇಂಟರ್ನೆಟ್ ಹಾಗೂ ಸ್ಟೆನೋಗ್ರಾಫರ್ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಅವರು ಮಾತನಾಡಿ ಮಾನ್ಯ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಾಯ್ಯ ಅವರು ಸಾರ್ವಜನಿಕರಿಂದ ದೂರು ಸ್ವೀಕರಿಸುವ ವಿಷಯದ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು. ಕಚೇರಿಯ ಮುಖ್ಯಸ್ಥರು ತಮ್ಮ ಕಚೇರಿಯ ಕೆಲಸಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ ಎಂದು ಸಲಹೆ ನೀಡಿದರು.ಸಭೆಯಲ್ಲಿ ಲೋಕಾಯುಕ್ತ ಡಿ.ಒ.ಎಸ್.ಪಿ ಸುನೀಲ್, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಲಕ್ಷ್ಮಿ, ಧನುಷ್ ಸೇರಿದದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.