ದಾವಣಗೆರೆ : ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಹತ್ಯೆಯ ಪ್ರಮುಖ ಆರೋಪಿ ಚಾವಳಿ ಸಂತೋಷ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬುಧವಾರ ಸ್ಥಳ ಮಹಜರ್ ವೇಳೆ ಬಾಲ ಬಿಚ್ಚಿದ್ದ ಚಾವಳಿ ಸಂತೋಷ್ ಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ನಗರದ ಆವರಗೆರೆ ಹೈಸ್ಕೂಲ್ ಬಳಿ ಈ ಘಟನೆ ನಡೆದಿದೆ.
ಇತ್ತೀಚಿಗೆ ನಡೆದಿದ್ದ ರೌಡಿಶೀಟರ್ ಕಣುಮಾ ಕೊಲೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.ಕಣುಮಾ ಸಂತೋಷ್ ನ ಮರ್ಡರ್ ಮಾಡಲು ಉಪಯೋಗಿಸಿದ್ದ ಮೊಬೈಲ್ ನ್ನು ಆವರಗೆರೆ ಬಳಿಯ ಪ್ರದೇಶವೊಂದರ ಬಳಿ ಆರೋಪಿಗಳು ಎಸೆದು ಪರಾರಿ ಆಗಿದ್ದರು.
ಸಿಟಿ ಡಿವೈಎಸ್ಪಿ ಶರಣ ಬಸವೇಶ್ವರ ಬಿ. ಅವರು ಸಿಬ್ಬಂದಿಯೊಂದಿಗೆ ಆವರಗೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಚಾವಳಿ ಸಂತೋಷ್ನನ್ನು ಸ್ಥಳ ಮಹಜರ್ ಗೆ ಕರೆದುಕೊಂಡು ತೆರಳಿದ್ದರು. ಈ ವೇಳೆ ಚಾವಳಿ ಸಂತೋಷ್ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅದರೂ ಪೊಲೀಸರ ಮಾತು ಕೇಳದ ಆರೋಪಿ ಚಾವಳಿ ಸಂತೋಷ್ ನ ಕಾಲಿಗೆ ಸಿಟಿ ಡಿವೈಎಸ್ಪಿ ಶರಣ ಬಸವೇಶ್ವರ ಅವರು ಗುಂಡು ಹೊಡೆದಿದ್ದಾರೆ.