ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ದೇವದತ್ತ ಪಡಿಕ್ಕಲ್ ಅವರು ಗಾಯಗೊಂಡಿದ್ದಾರೆ. ಅವರ ಬದಲಿಗೆ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಅವರನ್ನು ಆಯ್ಕೆ ಮಾಡಲಾಗಿದೆ. ಬಲಗಾಲಿನ ಸ್ನಾಯುಸೆಳೆತದಿಂದಾಗಿ ಪಡಿಕ್ಕಲ್ ಅವರು ತಂಡದಿಂದ ಹೊರಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಮಯಂಕ್ ಅವರು ದಶಕದ ಹಿಂದೆ ಆರ್‌ಸಿಬಿ ಮೂಲಕವೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಬಲಗೈ ಬ್ಯಾಟರ್ ಮಯಂಕ್ ಅವರು ಐಪಿಎಲ್‌ನಲ್ಲಿ ಒಟ್ಟು 127 ಪಂದ್ಯಗಳನ್ನು ಆಡಿರುವ ಅನುಭವಿ. 2661 ರನ್ ಪೇರಿಸಿದ್ದಾರೆ. ಅದರಲ್ಲಿ ಒಂದು ಶತಕ ಮತ್ತು 13 ಅರ್ಧಶತಕಗಳು ಇವೆ. ಇದೀಗ ಅವರನ್ನು ಆರ್‌ಸಿಬಿಯು 1 ಕೋಟಿ ನೀಡಿ ಖರೀದಿಸಿದೆ.ಈ ಕುರಿತು ತಂಡದ ನಿರ್ದೇಶಕ ಮೊ ಬೊಬಾಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡಿಕ್ಕಲ್ ಈ ಋತುವಿನಲ್ಲಿ ಆರ್‌ಸಿಬಿ ಪರ 10 ಪಂದ್ಯಗಳಲ್ಲಿ ಆಡಿದ್ದು, ಎರಡು ನಿರ್ಣಾಯಕ ಅರ್ಧಶತಕಗಳು ಸೇರಿದಂತೆ 247 ರನ್ ಗಳಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ 61 ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ 50 ರನ್ ಗಳಿಸುವ ಮೂಲಕ ಮಿಶ್ರ ಪ್ರದರ್ಶನ ತೋರಿದ್ದರು. ಆದರೆ ಆರ್‌ಸಿಬಿಗೆ ನಿರ್ಣಾಯಕ ಹಂತದಲ್ಲಿ ಅವರು ಪ್ರದರ್ಶನ ಕಳಪೆಯಾಗಿತ್ತು.
ಪ್ರಸ್ತುತ 11 ಪಂದ್ಯಗಳಿಂದ 16 ಅಂಕಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ಮುಂದಿನ ಮೇ 9 ರಂದು ಲಕ್ನೋದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಎದುರಿಸಲಿದೆ. ಅವರ ಕೊನೆಯ ಎರಡು ಲೀಗ್ ಪಂದ್ಯಗಳು ಅವರ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿವೆ.