ಶ್ರೀನಗರ : ಕಳೆದ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಂ ಬಳಿ 26 ಪ್ರವಾಸಿಗರ ಮೇಲೆ ಉಗ್ರರು ಭೀಕರವಾದ ಗುಂಡಿನ ದಾಳಿ ನಡೆಸಿದ್ದರು. ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಕಾಶ್ಮೀರದಲ್ಲಿ ನಡೆದಿದ್ದು, ಅಲೆಮಾರಿ ಮಹಿಳೆಯ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಹೌದು ಅಲೆಮಾರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಶ್ರೀನಗರದ ಹೊರವಲಯದ ನಿಶಾತ್ ಪ್ರದೇಶದಲ್ಲಿ ನಡೆದಿದೆ. ಐವರು ಮಕ್ಕಳ ತಾಯಿಯಾಗಿದ್ದ ಮಹಿಳೆ ಅಲೆಮಾರಿ ಬಕರವಾಲ್ ಸಮುದಾಯಕ್ಕೆ ಸೇರಿದ್ದು, ಆಕೆ ಮತ್ತು ಸಮುದಾಯದ ಸದಸ್ಯರು ವಾರದ ಹಿಂದೆ ತಮ್ಮ ಜಾನುವಾರುಗಳೊಂದಿಗೆ ರಿಯಾಸಿ ಜಿಲ್ಲೆಯಿಂದ ವಲಸೆ ಬಂದಿದ್ದರು.
ಮಹಿಳೆ ಹತ್ತಿರದ ಪ್ರದೇಶದಲ್ಲಿ ದನಗಳನ್ನು ಮೇಯಿಸಲು ಸಂಜೆ ಐದು ಗಂಟೆಯ ಸುಮಾರಿಗೆ ತನ್ನ ಟೆಂಟ್ನಿಂದ ಹೊರಬಂದಿದ್ದರು. ರಾತ್ರಿಯಾದರೂ ಅವರು ಜಾನುವಾರುಗಳೊಂದಿಗೆ ಮರಳದಿದ್ದಾಗ ನಾವು ಹುಡುಕಾಟ ಆರಂಭಿಸಿದ್ದೆವು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಅಸ್ವಸ್ಥಳಾಗಿ ಪತ್ತೆಯಾಗಿದ್ದಾಳೆ. ತಕ್ಷಣ ಆಸ್ಪತ್ರೆಗೆ ಸಾಗಿಸಿತ್ತಾದರು ಉಳಿಯಲಿಲ್ಲ ಎಂದು ಮಹಿಳೆಯ ಪುತ್ರ ತಿಳಿಸಿದ್ದಾನೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೋಲಿಸ್ ವಕ್ತಾರರು ತಿಳಿಸಿದರು. ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳಿಗೆ ಕಠಿಣ ಶಿಕ್ಷೆಗಾಗಿ ಸಮುದಾಯದ ಸದಸ್ಯರು ಆಗ್ರಹಿಸಿದ್ದಾರೆ.