ಬೆಂಗಳೂರು : ರೌಡಿಶೀಟರ್ ಹಾಗೂ ಸುಹಾಸ ಶೆಟ್ಟಿ ಹತ್ಯೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಆದರೆ ಸಭೆಯ ನಂತರ ಜಿ ಪರಮೇಶ್ವರ್ ಅವರು ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿರಲಿಲ್ಲ. ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು ಹತ್ಯೆಯಾದ ಸುಹಾಸ್ ಶೆಟ್ಟಿ ಮೇಲೆ 5 ಕೇಸ್ಗಳಿವೆ, ಹಾಗಾಗಿ ಅವರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿ. ಪರಮೇಶ್ವರ್, ಮಂಗಳೂರಿನ ಬಜಪೆ ಬಳಿ ಕೊಲೆಯಾದ ಸುಹಾಸ್ ಶೆಟ್ಟಿ ಮೇಲೆ ಐದು ಕೇಸ್ಗಳಿವೆ. ಹಾಗಾಗಿ ನಾವು ಯಾರೂ ಅವರ ಮನೆಗೆ ಭೇಟಿ ಕೊಟ್ಟಿಲ್ಲ.ಇದೊಂದು ಕೊಲೆ ಪ್ರಕರಣ ಆಗಿರುವುದರಿಂದ, ಸುಹಾಸ್ ಶೆಟ್ಟಿ ಮನೆಗೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದರು.
ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡ್ತಿದೆ. ಎಂಟು ಆರೋಪಿಗಳನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ ಈ ಪ್ರಕರಣ ಎನ್ಐಎಗೆ ಕೊಟ್ಟಿಲ್ಲ. ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡ್ತೇವೆ. ಬಿಜೆಪಿ ಆರೋಪ ಸರಿಯಲ್ಲ, ಬಿಜೆಪಿಯವರ ಕಾಲದಲ್ಲೂ ಮರ್ಡರ್ಗಳು ಆಗಿವೆ ಎಂದರು.