ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ರೆ ಸರಿಯಿರಲ್ವೇ?, ಏನು ಸಿದ್ದರಾಮಯ್ಯ ಅವರು ಮನೆಯಲ್ಲಿ ಕುಳಿತು ಮಾಡ್ತಾರಾ? ಎಂದು ಬಿಜೆಪಿಗರ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಕಿಡಿಕಾರಿದ್ದಾರೆ.
ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಚಿವರು, ಜನಗಣತಿ ಜತೆಗೆ ಜಾತಿಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತೇನೆ. ನಾವು ಕೇಂದ್ರ ಸರ್ಕಾರ ಮಾಡುವ ಗಣತಿಗೆ ವಿರೋಧ ಮಾಡುವುದಿಲ್ಲ. ಬಿಜೆಪಿ ನಾಯಕರು ಯಾಕೆ ಕಾಂತರಾಜು ಅವರ ವರದಿಯನ್ನು ವಿರೋಧಿಸುತ್ತಾರೆ? ಲೋಪಗಳಿದ್ದರೆ ಸರಿಮಾಡೋಣ. ಲೋಪಗಳ ಬಗ್ಗೆ ಚರ್ಚೆಯಾಗಲಿ. ಅದನ್ನ ಸರಾಸಗಟಾಗಿ ತಿರಸ್ಕರಿಸುವುದು ಸರಿಯೇ? ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು.
ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸೇರಿದಂತೆ ಬಿಜೆಪಿಗರು ಕಾಂತರಾಜು ಅವರ ವರದಿಯನ್ನು ನೋಡದೆ ವರದಿ ಬಗ್ಗೆ ಅಪಸ್ವರ ತೆಗೆದರಲ್ಲ? ಇದು ಸರಿಯೇ? ಬಿಜೆಪಿ ನಾಯಕರು ಜಾತಿ- ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದಾರೆ. ಕಾಂತರಾಜು ಅವರ ವರದಿ ವಿಚಾರದಲ್ಲಿ ಬಿಜೆಪಿಗರು ರಾಜಕೀಯ ಬೆಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಛೇಡಿಸಿದರು.
ರಾಜ್ಯದಲ್ಲಿ 5.89 ಲಕ್ಷ ಜನರ ಸರ್ವೆ ನಡೆದಿದೆ. ಯಾರು ಈ ರೀತಿ ಮಾಡ್ತಾರೆ. ಕೇಂದ್ರ ಸರ್ಕಾರ ಕೂಡ ಅಧಿಕಾರಿಗಳಿಂದಲೇ ತಾನೇ ಸಮೀಕ್ಷೆ ಮಾಡಿಸುವುದು. ಇವರು ಮಾಡಿಸುವ ಸಮೀಕ್ಷೆ ಸರಿ ಇರುತ್ತೆಯೇ? ಎಂದು ಪ್ರಶ್ನಿಸಿದರು.
ಇವತ್ತು ಬಡವರು ಎಲ್ಲ ಸಮುದಾಯದಲ್ಲಿ ಇದ್ದಾರೆ. ಅಂತಹ ಬಡವರನ್ನು ಕೂಡ ಮುಖ್ಯವಾಹಿನಿಗೆ ತಂದು ಸೂಕ್ತ ಶಿಕ್ಷಣ ಕೊಡಬೇಕಲ್ಲ. ಆ ಸಮುದಾಯದವರಿಗಾಗಿ ನಾವು ಕಾರ್ಯಕ್ರಮಗಳನ್ನು ರೂಪಿಸಬೇಕಲ್ಲ? ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಿಸಿದ್ದು ಯಾವ ಸರ್ಕಾರ?. ಬಿಜೆಪಿ ಸರ್ಕಾರವೇ ತಾನೇ ಅವರನ್ನು ನೇಮಿಸಿದ್ದು. ನಾವೇನು ಅವರನ್ನ ತೆಗೆದು ಬೇರೆ ಸಮಿತಿ ಮಾಡಿದ್ವಾ? ೨ಡಿ, ೨ಸಿ ಮೀಸಲಾತಿ ಕೊಟ್ಟರಲ್ಲ. ಯಾವ ಅಯೋಗದ ವರದಿ ಶಿಫಾರಸ್ಸು ಮಾಡಿದ್ರು. ಕಾಂತರಾಜು ವರದಿಯನ್ನೇ ಇಟ್ಕೊಂಡು ಮಾಡಿದ್ದು. ಅವರಿಗೆ ಆಗ ವರದಿ ಸರಿಯಿತ್ತಾ? ಎಂದು ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.