ಕೇರಳ : ಸುಳ್ಳು ಆರೋಪ ಸೇರಿದಂತೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಕೇರಳ ಕ್ರಿಕೆಟ್ ಸಂಸ್ಥೆಯಿಂದ ಭಾರತದ ಮಾಜಿ ಕ್ರಿಕೆಟ್ ಆಟಗಾರ ಎಸ್ ಶ್ರೀಶಾಂತ್ ಅವರನ್ನು ಕೇರಳ ಕ್ರಿಕೆಟ್ ಸಂಸ್ಥೆಯಿಂದ ಮೂರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ.
ಶ್ರೀಶಾಂತ್ ಅವರು ಕೇರಳದ ಸ್ಥಳೀಯ ಮಾಧ್ಯಮ ನಡೆಸಿದ್ದ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಸಂಜು ಸ್ಯಾಮ್ಸನ್ ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆಯ್ಕೆಯಾಗದಿರಲು ಕೆಸಿಎ ನೇರ ಕಾರಣ ಎಂದಿದ್ದರು. ವಿಜಯ್ ಹಜಾರೆ ಟ್ರೋಫಿಗೆ ಕೇರಳ ತಂಡದಿಂದ ಸ್ಯಾಮ್ಸನ್ ಅವರನ್ನು ಕೈಬಿಟ್ಟ ಕಾರಣದಿಂದ ಸಂಜುಗೆ ಚಾಂಪಿಯನ್ಸ್ ಟ್ರೋಫಿ ಆಡುವ ಅವಕಾಶ ಸಿಗಲಿಲ್ಲ. ಕೆಸಿಎ ಇಲ್ಲಿನ ಕ್ರಿಕೆಟಿಗರಿಗೆ ಯಾವುದೇ ಬೆಂಬಲ ನೀಡುವುದಿಲ್ಲ ಎಂದು ಶ್ರೀಶಾಂತ್ ಹೇಳಿದ್ದರು.
ಈ ಹಿಂದೆ, ಶ್ರೀಶಾಂತ್ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಶ್ರೀಶಾಂತ್ ಜತೆಗೆ ಫ್ರಾಂಚೈಸ್ ತಂಡಗಳಾದ ಕೊಲ್ಲಂ ಏರೀಸ್, ಅಲಪ್ಪುಳ ಟೀಮ್ ಲೀಡ್ ಮತ್ತು ಅಲಪ್ಪುಳ ರಿಪ್ಪಲ್ಸ್‌ಗೆ ಶೋ-ಕಾಸ್ ನೋಟಿಸ್ ನೀಡಲಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಸಿಎ ಇದೀಗ ಶ್ರೀಶಾಂತ್ ಅವರನ್ನು ಮೂರು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತೀಯ ತಂಡದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ವಿವಾದಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕೊಚ್ಚಿಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೆಸಿಎ(KCA) ಹೇಳಿಕೆಯಲ್ಲಿ ತಿಳಿಸಿದೆ. ಶ್ರೀಶಾಂತ್ ಪ್ರಸ್ತುತ ಕೇರಳ ಕ್ರಿಕೆಟ್ ಲೀಗ್‌ನ ಫ್ರಾಂಚೈಸಿ ತಂಡವಾದ ಕೊಲ್ಲಂ ಏರೀಸ್‌ನ ಸಹ-ಮಾಲೀಕರಾಗಿದ್ದಾರೆ.