ಕಾಸರಗೋಡು : ಪೋಷಕರು ಎಷ್ಟೇ ಎಚ್ಚರವಹಿಸಿದರು ಮಕ್ಕಳು ಅರಿವಿಲ್ಲದೆ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇದೀಗ ಕಾಸರಗೋಡಿನಲ್ಲಿ ಕೂಡ ಅಂತಹದ್ದೆ ಘಟನೆ ನಡೆದಿದ್ದು, ಹಲಸಿನ ಹಣ್ಣು ಕತ್ತರಿಸುವಾಗ ಆಕಸ್ಮಿಕವಾಗಿ ಕತ್ತಿ ತಲೆಗೆ ಬಡಿದು 8 ವರ್ಷದ ಬಾಲಕ ಸಾವನ್ನಪ್ಪಿರುವ ಘೋರ ದುರಂತ ಸಂಭವಿಸಿದೆ.
ಕಾಸರಗೋಡಿನ ವಿದ್ಯಾನಗರ ಠಾಣಾ ವ್ಯಾಪ್ತಿಯ ಪಾಡಿ ಬೆಳ್ಳೂರಡ್ಕ ಎಂಬಲ್ಲಿ ಈ ಘಟನೆ ನಡೆದಿದೆ.ಮೃತನನ್ನು ಹುಸೈನ್ ಶಹಬಾಸ್ (8) ಎಂದು ತಿಳಿದುಬಂದಿದೆ.ತಾಯಿ ಜೊತೆ ಆಲಂಪಾಡಿ ಬೆಳ್ಳೂರಡ್ಕದಲ್ಲಿರುವ ಅಜ್ಜಿ ಮನೆಗೆ ಹುಸೈನ್ ಬಂದಿದ್ದನು. ತಾಯಿ ಅಡುಗೆ ಕೋಣೆ ಹೊರಗಡೆ ಮುಟ್ಟು ಕತ್ತಿ ಯಲ್ಲಿ ಹಲಸಿನ ಹಣ್ಣು ತುಂಡರಿಸುತ್ತಿದ್ದರು.
ಈ ವೇಳೆ ಹೊರಗಡೆಯಿಂದ ಆಟವಾಡುತ್ತಿದ್ದ ಹುಸೈನ್ ಓಡಿ ಕೊಂಡುಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ಮುಟ್ಟು ಕತ್ತಿಯ ಮೇಲೆ ಬಿದ್ದಿದ್ದಾನೆ.ಗಂಭೀರ ಗಾಯಗೊಂಡ ಬಾಲಕನನ್ನು ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ದರೂ ಸಹ ಬಾಲಕ ಉಳಿಯಲಿಲ್ಲ. ವಿದ್ಯಾನಗರ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದಾರೆ.