ಬೆಂಗಳೂರು : ಈಗಾಗಲೆ ಕಾವೇರಿ ನೀರಿನ ದರ ಹಾಗೂ ಮೆಟ್ರೋ ದರ ಏರಿಕೆ ಮಾಡಿ ಸರ್ಕಾರ ಬೆಂಗಳೂರಿನ ಜನತೆಗೆ ಶಾಕ್ ನೀಡಿದ್ದು, ಇದೀಗ ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಲಿದೆ. ಆಟೋ ಪ್ರಯಾಣದ ದರ ಹೆಚ್ಚಳಕ್ಕೆ ಇದೀಗ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಬೆಂಗಳೂರಿನ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಹೌದು ಆಟೋ ದರ ಏರಿಕೆ ಮಾಡಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಇನ್ನು ಅಧಿಕೃತ ಆದೇಶ ಹೊರ ಬೀಳುವುದು ಮಾತ್ರ ಬಾಕಿ ಇದೆ. ಮೇ 13 ರಂದು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.ಈಗಾಗಲೇ ಅನೇಕ ಅಗತ್ಯ ವಸ್ತುಗಳ ದರ ಏರಿಕೆ ಆಗಿದೆ. ಹೀಗಾಗಿ ಆಟೋ ಮೀಟರ್ ದರ ಏರಿಕೆ ಮಾಡಲು ಜಿಲ್ಲಾಧಿಕಾರಿ ಕೂಡಲೇ ಗ್ರೀನ್ ಸಿಗ್ನಲ್ ನೀಡಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
ಆಟೋ ಮೀಟರ್ ದರ ಏರಿಕೆ ಮಾಡುವಂತೆ ಕಳೆದ ಮೂರು ವರ್ಷಗಳಿಂದ ಆಟೋ ಚಾಲಕ ಹಾಗೂ ಮಾಲೀಕರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತಾ ಬಂದಿತ್ತು. ಇದೀಗ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಆಟೋ ಚಾಲಕರ ಮನವಿಯನ್ನು ಪುರಸ್ಕರಿಸಿ, ಆಟೋ ದರ ಏರಿಕೆ ಮಾಡಲು ಮನಸ್ಸು ಮಾಡಿದೆ. ಅಧಿಕೃತ ಆದೇಶ ಹೊರಬೀಳುವುದಷ್ಟೇ ಬಾಕಿ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.