ಚಾಮರಾಜನಗರ : ಸಂಬಂಧಿ ಮಗುವಿನೊಂದಿಗೆ ಆಟವಾಡುತ್ತಿದ್ದ ವೇಳೆ ಕಾಲಿಗೆ ಪೆಟ್ಟಾಗಿದೆ. ಈ ವೇಳೆ ಮಗುವಿಗೆ ಏನಾಗಿದೆಯೋ ಏನೋ ಎಂಬ ಭೀತಿಯಲ್ಲಿ 12 ವರ್ಷದ ಬಾಲಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಪ್ರಜ್ವಲ್ (12) ಎಂದು ತಿಳಿದುಬಂದಿದ್ದು, ಬಾಲಕ ಪ್ರಜ್ವಲ್ ಲೊಕ್ಕನಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಬಿಲ್ ಕಲೆಕ್ಟರ್ ಶೀಲಾ ರವರ ಪುತ್ರ ಪ್ರಜ್ವಲ್ ಎಂದು ಗುರುತಿಸಲಾಗಿದೆ.ಪ್ರಜ್ವಲ್ ತನ್ನ ಸಂಬಂಧಿಕರ ಮಗುವಾದ ಅಭಿಷೇಕ್ ಜೊತೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಆ ಮಗುವಿನ ಕಾಲಿಗೆ ಪೆಟ್ಟಾಗಿದ್ದು, ಈ ವೇಳೆ ಮಗುವಿನ ಪೋಷಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಮಗುವಿಗೆ ಏನಾದರೂ ಆಗಿದೆಯೇ ಎಂಬ ಭೀತಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಘಟನೆ ತಿಳಿದು ಅಕ್ಕಪಕ್ಕದ ಮನೆಯವರು ತಕ್ಷಣ ಪ್ರಜ್ವಲ್ ನನ್ನು ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.
ಬಳಿಕ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದಾಗ, ತಪಾಸಣೆ ನಡೆಸಿದ ವೈದ್ಯರು ಪ್ರಜ್ವಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಜ್ವಲ್‌ನ ಸೋದರ ಮಾವ ರಂಗಸ್ವಾಮಿ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.