ಶಿವಮೊಗ್ಗ : ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಬಲಿಯಾಗಿದ್ದಾರೆ.ಇತ್ತೀಚಿಗೆ ಅವರ ಅಂತ್ಯಕ್ರಿಯೆ ಕೂಡ ನೆರೆವೆರಿದ್ದು, ಸರ್ಕಾರ ಸಹ ಮೃತರ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ಘೋಷಿಸಿದೆ. ಇದಿಗ ಮೃತ ಮಂಜುನಾಥ್ ಪತ್ನಿ ಪಲ್ಲವಿ ಅವರು ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಹಲ್ಲಾಂನಲ್ಲಿ ಭಯೋತ್ಪಾದಕರು ನನ್ನ ಪತಿಯನ್ನು ಕೊಂದಾಗ, ನಮ್ಮನ್ನು ಸಾಯಿಸಿ ಎಂದು ನಾನು ಮತ್ತು ನನ್ನ ಮಗ ಕೂಗಿ ಭಯೋತ್ಪಾದಕರನ್ನು ಕೇಳಿದ್ದು ಹೌದು. ಆಗ ಆ ಉಗ್ರರು ‘ಮೋದಿಗೆ ಹೋಗಿಹೇಳಿ’ ಎಂದಿದ್ದೂ ಹೌದು. ಆದರೆ, ನಾನು ಈ ಮಾತುಗಳನ್ನು ಹೇಳಿದ್ದಕ್ಕೆ ಅನೇಕ ನೆಗೆಟಿವ್ ಕಾಮೆಂಟ್ಸ್ ಬರುತ್ತಿದೆ ಎಂದು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಹೇಳಿದ್ದಾರೆ. ನಾನು ಈ ಮಾತುಗಳನ್ನೆಲ್ಲಾ ವಿಡಿಯೋ ಮಾಡಿಟ್ಟುಕೊಳ್ಳಬೇಕಿತ್ತೇನು ಎಂದು ಪ್ರಶ್ನಿಸಿದ್ದಾರೆ.
ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಅಂತಹ ಸನ್ನಿವೇಶದಲ್ಲಿ ನಡೆಯುವ ಘಟನೆಗಳನ್ನು ಯಾರಾದರೂ ವಿಡಿಯೋ ಮಾಡಿ ಇಟ್ಟುಕೊಳ್ಳಲು ಸಾಧ್ಯವಾ? ಇಂತಹ ನೆಗೆಟಿವ್ ಕಾಮೆಂಟ್ಸ್ ಗಳಿಂದ ತೀವ್ರವಾಗಿ ಬೇಸರವಾಗುತ್ತಿದೆ. ಆದರೆ, ಇಂತಹ ಕಾಮೆಂಟ್ಸ್ ಗಳಿಗೆ ನಾವು ಏನು ಮಾಡಲು ಸಾಧ್ಯ ಎಂದು ಮರು ಪ್ರಶ್ನಿಸಿದರು. ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ. ಬಹುಶಃ ನನ್ನ ಪತಿಗೆ ದೂರದಿಂದಲೇ ಗುಂಡು ಹಾರಿಸಿದ್ದರಿಂದ ಈ ಮಾತನ್ನು ಕೇಳಿಲ್ಲ ಎಂದೆನಿಸುತ್ತದೆ. ಆದರೆ, ಮಿಕ್ಕವರಿಗೆ ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎಂದು ಅಲ್ಲಿದ್ದ ಬೇರೆಯವರು ಹೇಳಿದ್ದು ಹೌದು ಎಂದು ಪಲ್ಲವಿ ತಿಳಿಸಿದರು.