ಬೆಳಗಾವಿ : ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೇಲೆ ಕೈ ಎತ್ತಿರುವ ಪ್ರಸಂಗ ನಡೆದಿದೆ.
ಸಿಎಂ ಭಾಷಣ ಮಾಡುತ್ತಿರುವಾಗ, ಸಮಾವೇಶದಲ್ಲಿ ಕೆಲ ಬಿಜೆಪಿಗರು ಎನ್ನಲಾದವರಿಂದ ಕಾಂಗ್ರೆಸ್ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಿಎಂ ಭಾಷಣದ ವೇಳೆ ಗದ್ದಲ ಸೃಷ್ಟಿಸಲು ಕೆಲ ಗುಂಪು ಮುಂದಾದಾಗ ಸಿಎಂ ಪೊಲೀಸರು ಏನು ಮಾಡುತ್ತಿದ್ದೀರಿ? ಯಾವನೋ ಅವನು ಎಸ್ಪಿ? ಬಾ ಇಲ್ಲಿ ? ಅಲ್ಲಿ ಏನು ನಡೆಯುತ್ತಿದೆ ಗೊತ್ತಾಗಲ್ವಾ ಎಂದು ಏಕವಚನದಲ್ಲಿ ಗದರಿದ ಸಿಎಂ, ಸಿಟ್ಟಿನಿಂದ ಹೊಡೆಯುವಂತೆ ಕೈ ಎತ್ತಿದ್ದಾರೆ.
ನಿನ್ನೆ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆಯೇ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗಿದೆ. ಕಪ್ಪು ಬಟ್ಟೆ ಹಿಡಿದು ವೇದಿಕೆಯತ್ತ ನುಗ್ಗಲು ಬಿಜೆಪಿ ಮಹಿಳಾ ಕಾರ್ಯಕರ್ತರು ಯತ್ನಿಸಿದ್ದಾರೆ. ಕಪ್ಪು ಬಟ್ಟೆ ಪ್ರದರ್ಶಿಸಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಗಿತ್ತು.
ಮಹಿಳಾ ಕಾರ್ಯಕರ್ತೆಯರು ಘೋಷಣೆ ಕೂಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಗೊಂದಲ ಏರ್ಪಟ್ಟಿತ್ತು. ಈ ವೇಳೆ ಸಿಎಂ ಕೆಲಹೊತ್ತು ಭಾಷಣ ಸ್ಥಗಿತಗೊಳಿಸಿದ್ದರು. ಪೊಲೀಸರನ್ನು ವೇದಿಕೆಗೆ ಕರೆಯಿಸಿ ಸಿದ್ದರಾಮಯ್ಯ ಕ್ಲಾಸ್ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಹೆಚ್ಚುವರಿ ಎಸ್ಪಿ ನಾರಾಯಣ ಬರಮನಿ ಮೇಲೆ ಸಿಎಂ ಕೈ ಮಾಡಲು ಮುಂದಾಗಿದ್ದಾರೆ.