ಬೆಂಗಳೂರು : ಇತ್ತೀಚಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸೈಬರ್ ವಂಚಕರು ಅನೇಕರನ್ನು ಮೋಸದ ಚಾಲಕ್ಕೆ ಸಿಲುಕಿಸಿ ಲಕ್ಷಾಂತರ ಕೋಟ್ಯಾಂತರ ರೂಪಾಯಿ ಕೊಳೆ ಹೊಡೆದಿದ್ದಾರೆ ಇದೀಗ ಬೆಂಗಳೂರಿನಲ್ಲಿ ಸಹ ಓರ್ವ ಯುವತಿ ಅರೆಸ್ಟ್ ಆಗುವ ಮೂಲಕ 84 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾಳೆ.
ಹೌದು ವಂಚನೆಗೆ ಒಳಗಾದ ಯುವತಿಯನ್ನು ಗರುಡುಚಾರಪಾಳ್ಯ ನಿವಾಸಿ ಕೊಂಡೂರು ಶ್ರೀಮತಿ ಎಂದು ತಿಳಿದುಬಂದಿದೆ. ವಂಚಕ ಆರ್‌ಬಿಐ ಅಧಿಕಾರಿ ಸೋಗಿನಲ್ಲಿ ಯುವತಿಗೆ ವಾಟ್ಸ್‌ಆಯಪ್‌ನಲ್ಲಿ ವಿಡಿಯೋ ಕರೆ ಮಾಡಿದ ಅಪರಿಚಿತ ವ್ಯಕ್ತಿ, ‘ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ’ ಎಂದು ಡಿಜಿಟಲ್ ಆರೆಸ್ಟ್ ಮಾಡಿ 84.56 ಲಕ್ಷ ರೂ. ಸುಲಿಗೆ ಮಾಡಿದ್ದಾನೆ.
ಕಳೆದ ಡಿ.13ರಂದು ಶ್ರೀಮತಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಆರ್‌ಬಿಐ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ‘ನಿಮ್ಮ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ನಿಮ್ಮ ಮೊಬೈಲ್ ನಂಬರ್ ಬಳಸಿಕೊಂಡು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನ್ನು ಉಪಯೋಗಿಸಿಕೊಂಡು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆದರಿಂದ ಮುಂಬೈ ಪೊಲೀಸರೊಂದಿಗೆ ಮಾತನಾಡಿ ಎಂದು ನಂಬರ್ ಕೊಟ್ಟಿದ್ದ. ಆ ನಂಬರ್‌ಗೆ ಕರೆ ಮಾಡಿದಾಗ ‘ಜೆಟ್ ಏರ್‌ವೇಸ್‌ನ ಮುಖ್ಯಸ್ಥ ನರೇಶ್ ಗೋಯಲ್ ಅವರನ್ನು ಮನಿಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸಲಾಗಿದೆ.
ಈ ಕೇಸಿನ ತನಿಖೆ ವೇಳೆ 300 ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದು, ಇದರಲ್ಲಿ ನಿಮ್ಮ ಖಾತೆ ಸಹ ಇದೆ ಎಂದು ಸುಳ್ಳು ಹೇಳಿದ್ದ. ತನಿಖೆ ಸಲುವಾಗಿ ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕು. ಆದ್ದರಿಂದ ನಿಮ್ಮಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನು ಆರ್‌ಬಿಐ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು. ಇಲ್ಲವಾದರೆ, ಆರೆಸ್ಟ್ ಮಾಡಲಾಗುವುದು ಎಂದು ಬೆದರಿಸಿದ್ದ.
ಇದರಿಂದ ಭಯಗೊಂಡ ಶ್ರೀಮತಿ, ತನ್ನ ಬ್ಯಾಂಕ್ ಖಾತೆಯಲ್ಲಿದ್ದ 84.56 ಲಕ್ಷ ರೂ. ಅನ್ನು ಹಂತ ಹಂತವಾಗಿ ಆರ್‌ಟಿಜಿಎಸ್ ಮತ್ತು ಯುಪಿಐ ಮೂಲಕ ವರ್ಗಾವಣೆ ಮಾಡಿದ್ದರು. ವಾಪಸ್ ಹಣ ಬಾರದೆ ಇದ್ದಾಗ ಅನುಮಾನ ಬಂದು ಕರೆ ಮಾಡಿದಾಗ ಸಂಪರ್ಕ ಲಭ್ಯವಾಗಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ನೊಂದ ಯುವತಿ, ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.