ಕಲಬುರ್ಗಿ : ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದು ನಿಮ್ಮ ರಾಜ್ಯಗಳಲ್ಲಿನ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ಅವರನ್ನು ವಾಪಸ್ ಕಳುಹಿಸಿ ಎಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಪಾಕಿಸ್ತಾನ ಪ್ರಜೆಗಳನ್ನು ಗುರುತಿಸಿ ವಾಪಸ್ ಕಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಇದೀಗ ಕಲ್ಬುರ್ಗಿಯಲ್ಲಿ ಒಟ್ಟು 9 ಜನ ಪಾಕಿಸ್ತಾನಿ ಪ್ರಜೆಗಳು ಇದ್ದಾರೆ ಎಂದು ಕಲ್ಬುರ್ಗಿಗೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಮಾಹಿತಿ ನೀಡಿದರು. ಕಳೆದ 20 ವರ್ಷದಿಂದ ಕಲ್ಬುರ್ಗಿಯಲ್ಲಿ ಪಾಕಿಸ್ತಾನ ಪ್ರಜೆಗಳು ಇದ್ದಾರೆ. 9 ಜನ ಪಾಕಿಸ್ತಾನ ಪ್ರಜೆಗಳ ಪೈಕಿ ಇಬ್ಬರು ದೀರ್ಘಾವಧಿ ವೀಸಾದಲ್ಲಿ ಕಲ್ಬುರ್ಗಿಯಲ್ಲೆ ನೆಲೆಸಿದ್ದಾರೆ. ಉಳಿದವರು ವಿಜಿಟರ್ ವಿಸಾದ ಅಡಿ ಇದ್ದಾರೆ. ಇನ್ನು ಒಬ್ಬರು ಮಾತ್ರ ಅಮೇರಿಕಾದಲ್ಲಿದ್ದಾರೆ ಎಂದು ಕಲ್ಬುರ್ಗಿಯಲ್ಲಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಹೇಳಿಕೆ ನೀಡಿದರು.
ಇನ್ನು ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಿನ್ನೆ ಕಲಬುರ್ಗಿಯಲ್ಲಿ ಬಜರಂಗದಳ ಕಾರ್ಯಕರ್ತರು ನಗರದ ಜಗತ್ ವೃತ್ತ, ಸಾರ್ವಜನಿಕ ಶೌಚಾಲಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪಾಕಿಸ್ತಾನ ಧ್ವಜಗಳನ್ನು ಅಂಟಿಸಿ ಆಕ್ರೋಶ ಹೊರ ಹಾಕಿದರು. ಬಳಿಕ ಗುಪ್ತಚರ ಇಲಾಖೆ ಬಂದು ಧ್ವಜಗಳನ್ನು ತೆರವುಗೊಳಿಸಿದ್ದು, ನಂತರ ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.