ಮೈಸೂರು: ಯುವ ಕಾಂಗ್ರೆಸ್ ಕಾರ್ಯಕರ್ತರು ಜಾತಿ, ಧರ್ಮಗಳ ಸಂಕೋಲೆಗಳಿಗೆ ಸಿಲುಕಿಕೊಳ್ಳಬೇಡಿ. ಮಾನವೀಯತೆ ಹಾಗೂ ಕಾಂಗ್ರೆಸ್ ಪಕ್ಷವೇ ನಿಮ್ಮ ಜಾತಿಯಾಗಬೇಕು. ಒಂದು ನೀತಿ, ಸಿದ್ದಾಂತದ ಮೇಲೆ ಕೊನೆಯತನಕ ಬದುಕಬೇಕು. ಯುವ ಕಾಂಗ್ರೆಸ್ಸಿನಿಂದ ಬೆಳೆದವರು ಎಂದಿಗೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಿವಿಮಾತು ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ನಡೆದ ಯುವ ಕಾಂಗ್ರೆಸ್ ತರಬೇತಿ ಕಾರ್ಯಗಾರದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಮಾತನಾಡಿದರು.
“ನಾನು ಶಾಲೆಯಲ್ಲಿ ಓದುವಾಗ, ಎಂಎಲ್ ಎ ಆದಾಗ ಜಾತಿ ಗೊತ್ತಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ನಮಗೆ ಅರಿವಿಲ್ಲದೇ ಈ ಸುಳಿಯಲ್ಲಿ ಸಿಲುಕಿಕೊಂಡೆವು. ನೀವು ಇವುಗಳ ಬಲೆಗೆ ಬೀಳಬೇಡಿ. ರಾಜಕೀಯದಲ್ಲಿ ಶ್ರಮಪಟ್ಟರೆ ಫಲವುಂಟು. ದೊಡ್ಡ ಸಮೂಹ ಸೇರಿಸಬೇಡಿ, ಪುಟ್ಟದಾಗಿ ಬೆಳೆಯುತ್ತಾ ಹೋಗಿ ಆಗ ಎಲ್ಲಾ ನಾಯಕರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ನಾನು ಹೀಗೆ ಬೆಳೆದಿದ್ದಕ್ಕೆ ಅಂತಿಮ ಪದವಿ ಓದುವಾಗಲೇ ಟಿಕೆಟ್ ನೀಡಿದರು. ನನಗೆ ಅವಕಾಶ ಕೊಟ್ಟವರು ದಡ್ಡರೇ?. ವಿದ್ಯಾರ್ಥಿ ನಾಯಕತ್ವ ಬೆಳೆಯಬೇಕು ಎಂದು ಕೀರ್ತಿ ಗಣೇಶ್ ನನ್ನು ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಲಾಗಿದೆ” ಎಂದರು.
“ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಜಾತಿ, ಧರ್ಮ ನೋಡಿ ನೀಡುತ್ತಿಲ್ಲ. ಈ ಸಮಾಜದ ಎಲ್ಲಾ ವರ್ಗಗಳ ಜನರಿಗೆ ಗ್ಯಾರಂಟಿ ಯೋಜನೆ ಮೂಲಕ 52 ಸಾವಿರ ಕೋಟಿ ನೀಡುತ್ತಿದ್ದೇವೆ. ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಶಿಕ್ಷಣದ ಹಕ್ಕು, ನರೇಗಾ, ಆಹಾರ ಭದ್ರತಾ ಕಾಯ್ದೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರಲಾಯಿತು” ಎಂದರು.
“ಜನಪರವಾದ ಒಂದೇ ಒಂದು ಯೋಜನೆಗಳನ್ನು ಬಿಜೆಪಿ ತಂದಿಲ್ಲ. 371 ಜೆ ಯೋಜನೆ ನಮ್ಮ ಹೆಗ್ಗಳಿಕೆ. ಅಂದು ಅಡ್ವಾನಿಯವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದರು. ಅಂಗನವಾಡಿ ಯೋಜನೆ ತಂದಿದ್ದು ಇಂದಿರಾಗಾಂಧಿ ಅವರು, ಆಶಾ ಯೋಜನೆ ತಂದಿದ್ದು ಮನಮೋಹನ್ ಸಿಂಗ್ ಅವರು. ಸಿಇಟಿ ತಂದಿದ್ದು ವೀರಪ್ಪ ಮೊಯ್ಲಿ ಅವರು, ಬಂಗಾರಪ್ಪ ಅವರು ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಯೋಜನೆ ತಂದರು. ಇದರಿಂದ ವರ್ಷಕ್ಕೆ 17 ಸಾವಿರ ಕೊಡುತ್ತಿದ್ದೇವೆ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ” ಎಂದರು.
“ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷದ ನೇತೃತ್ವವಹಿಸಿಕೊಂಡ ವರ್ಷದಲ್ಲಿ ಹೊಸದಾಗಿ ಯುವ ಕಾಂಗ್ರೆಸ್ ನೇತೃತ್ವವಹಿಸಿಕೊಂಡಿರುವ ನೀವೇ ಪುಣ್ಯವಂತರು. ನೀವು ಗಾಂಧಿಯವರ ತತ್ವ, ಆದರ್ಶಗಳನ್ನು ಅಧ್ಯಯನ ಮಾಡಬೇಕು, ಸಾಧ್ಯವಾದಷ್ಟು ಮೈಗೂಡಿಸಿಕೊಳ್ಳಬೇಕು” ಎಂದು ಹೇಳಿದರು.
“ದೇಶದ ಆತ್ಮಗೌರವದಂತಿರುವ ರಾಷ್ಟ್ರಧ್ವಜ, ಗೀತೆ, ಸಂವಿಧಾನವನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ದೇಶವನ್ನು ಬಲಿಷ್ಠಗೊಳಿಸುವುದಕ್ಕೆ ಇದಕ್ಕಿಂತ ಇನ್ನೇನು ಬೇಕು. ನಮ್ಮ ಕಾಂಗ್ರೆಸ್ ಕಾರ್ಯಕರ್ತ ನಿಧನ ಹೊಂದಿದರೆ ಅವನ ಮೈ ಮೇಲೆ ತ್ರಿವರ್ಣದ ಕಾಂಗ್ರೆಸ್ ಧ್ವಜ ಹಾಕಬಹುದು. ಇದನ್ನು ಬಿಜೆಪಿ, ದಳದವರು ಹಾಕಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದರು.
“ಈ ದೇಶದ ಯುವ ಸಮೂಹವನ್ನು ಪ್ರತಿನಿಧಿಸುವ ನಿಮ್ಮ ಬಳಿ ಪ್ರಶ್ನೆ ಹಾಗೂ ಉತ್ತರ ಎರಡೂ ಇದೆ. ಯುವ ಕಾಂಗ್ರೆಸ್ ಚುನಾವಣೆ ಮುಗಿದಿದೆ. ರಾಜಕೀಯದಲ್ಲಿ ವೈರತ್ವ ಎನ್ನುವುದು ಇರುವುದಿಲ್ಲ. ಜೊತೆಗೆ ರಾಜಕೀಯದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ‘ಸಾಧ್ಯತೆಗಳ ಕಲೆಯೇ ರಾಜಕೀಯ’ ಅದಕ್ಕೆ ನೀವು ಸಾಧ್ಯತೆಗಳನ್ನು ಕರಗತ ಮಾಡಿಕೊಳ್ಳಬೇಕು” ಎಂದರು.
“ಸಿದ್ದರಾಮಯ್ಯ ಅವರು ದಳದಲ್ಲಿದ್ದರು. ಅಲ್ಲಿಂದ ಕಾಂಗ್ರೆಸ್ ಗೆ ಬಂದರು. ನಂತರ ಬದಲಾದ ಸಂದರ್ಭದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು 38 ಸ್ಥಾನ ಗೆದ್ದಿದ್ದರು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದೆವು. ಆದರೆ ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ಅದಕ್ಕೆ ರಾಜಕೀಯದಲ್ಲಿ ಇಂತಹ ಸ್ಥಿತ್ಯಂತರಗಳು ಸರ್ವೇ ಸಾಮಾನ್ಯ. ಇಲ್ಲಿ ಯಾರೂ ನನ್ನ ಶಿಷ್ಯರಿಲ್ಲ. ಯುವ ಕಾಂಗ್ರೆಸ್ ಅಧ್ಯಕ್ಷನಾದ ಮಂಜುನಾಥ್ ಶಿಷ್ಯರಿಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು. ನಾವೆಲ್ಲರೂ ಒಂದು ದೊಡ್ಡ ಮರದ ಕೆಳಗೆ ಕೆಲಸ ಮಾಡುವವರು” ಎಂದರು.
“ಕೊರೋನಾ ಸಂದರ್ಭದಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಜೂಮ್ ಮುಖಾಂತರ ಸಭೆ ನಡೆಸಿ ಪಕ್ಷ ಸಂಘಟನೆ ಮಾಡಲಾಯಿತು. ಅಂದು ಸಭೆಗೆ ಸರ್ಕಾರ ಅನುಮತಿ ನೀಡದೇ ಇದ್ದರು ಕಾರ್ಯಕರ್ತರ ಸಭೆ ನಡೆಸಿ ಹೊಸ ಮುನ್ನುಡಿ ಬರೆಯಲಾಯಿತು” ಎಂದು ಹೇಳಿದರು.
“ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದವರು ನಿಮಗೆ ಮತ ಹಾಕಿದ ಯುವಕರಲ್ಲಿ ‘ನಾನು ಕಾಂಗ್ರೆಸ್ಸಿಗ’ ಎನ್ನುವ ಭಾವನೆ ಮೂಡಿಸಿದರೆ ನಿಜವಾದ ನಾಯಕರಾದಂತೆ. ಯಾರು ನಿಮಗೆ ಮತ ಹಾಕಿದ್ದಾರೆ ಅವರನ್ನು ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ಏಕೆಂದರೆ ಚುನಾವಣೆ ವೇಳೆ ಬಿಜೆಪ, ದಳದ ಯುವಕರು ಮತ ಹಾಕಿರುತ್ತಾರೆ. ಅವರನ್ನು ಕಾಂಗ್ರೆಸ್ಸಿಗರಾಗಿ ಬದಲಾಯಿಸುವುದು ನಿಮ್ಮ ಉದ್ದೇಶವಾಗಬೇಕು. ಇದು ಮಾಡಿದರೆ ನಿಮ್ಮ ನಾಯಕತ್ವ ಗುಣ ಬೆಳೆಯುತ್ತದೆ. ಇಲ್ಲದಿದ್ದರೆ ನೀವು ಮೋಸಗಾರರು ಎನಿಸಿಕೊಳ್ಳಬೇಕಾಗುತ್ತದೆ” ಎಂದರು.
“ಈ ದೇಶದ 18 ವರ್ಷದ ಯುವಕರಿಗೆ ಮತದಾನದ ಹಕ್ಕು ಕೊಟ್ಟಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಈ ದೇಶಕ್ಕಾಗಿ ನೆಹರು ಕುಟುಂಬ ಪ್ರಾಣ ಕೊಟ್ಟಿದೆ. ಸೋನಿಯಾ ಗಾಂಧಿ ಅವರು ಅಧಿಕಾರ ತ್ಯಾಗ ಮಾಡಿ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರಿಗೆ ಪದವಿ ನೀಡಿದರು. ಬಾಬು ಜಗಜೀವನರಾಮ್ ಅವರು ಕೊನೆಗಾಲದಲ್ಲಿ ಕಾಂಗ್ರೆಸ್ಸಿಗನಾಗಿ ಸಾಯಬೇಕು ಎಂದು ಮತ್ತೆ ಕಾಂಗ್ರೆಸ್ ಸೇರಿದ್ದರು” ಎಂದರು.
“ನೀವು ಯಾವುದೇ ನಾಯಕನ ಹಿಂಬಾಲಕರಾದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಪಕ್ಷಕ್ಕಾಗಿ ದುಡಿಯಬೇಕು. 2028 ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಇಂದಿನಿಂದಲೇ ಯುವ ಕಾಂಗ್ರೆಸ್ ಕಾರ್ಯಕರ್ತರು ದುಡಿಯಬೇಕು” ಎಂದರು.
“ಮಹಾರಾಷ್ಟ್ರ ಚುನಾವಣೆ ವೇಳೆ 5 ಗಂಟೆಯಿಂದ 7 ಗಂಟೆ ವೇಳೆಗೆ 75 ಲಕ್ಷ ಮತ ಚಲಾವಣೆಯಾಗಿದೆ. ಇದು ಹೇಗೆ ಸಾಧ್ಯ. ಇದರ ಬಗ್ಗೆ ರಾಹುಲ್ ಗಾಂಧಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಬಿಜೆಪಿಯವರು ನೂರಿನ್ನೂರು ಮತಗಳನ್ನು ವ್ಯತ್ಯಾಸ ಮಾಡುತ್ತಿದೆ. ನಾನು ಇದರ ಬಗ್ಗೆ ಮಾತನಾಡಲು ಹೋಗಲಿಲ್ಲ. ಆದರೆ ಇದರ ಬಗ್ಗೆ ಮಾಹಿತಿ ಇತ್ತು. ಅದಕ್ಕೆ ನೀವು ಬೂತ್‌ಮಟ್ಟದಲ್ಲಿ ಕೆಲಸ ಮಾಡಬೇಕು. ಯಾವಾಗ ಬೇಕಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಬಹುದು,ಇದಕ್ಕೆ ತಯಾರಾಗಿ” ಎಂದರು.
“ಇತ್ತೀಚಿಗೆ ಸೋತ ಅಭ್ಯರ್ಥಿಗಳ ಸಭೆ ನಡೆಸಿದ್ದೆ. ಬೆಳ್ತಂಗಡಿಯ ರಕ್ಷಿತ್ ಶಿವರಾಂ ಅವರು ಪ್ರತಿ ಬೂತ್ ಮಟ್ಟದಲ್ಲಿ ಡಿಜಿಟಲ್ ಯೂತ್ ನೇಮಕ ಮಾಡಿ ತರಬೇತಿ ನೀಡಿದ್ದಾರೆ. ಕೇವಲ ಹಣದಿಂದ ರಾಜಕಾರಣ ಮಾಡಲು ಸಾಧ್ಯವಿಲ್ಲ. ಕೇರಳ, ದಕ್ಷಿಣ ಕನ್ನಡದಲ್ಲಿ ಹಣವಿಲ್ಲದೇ ಗೆಲ್ಲಬಹುದು. ಈಗಿನ ಯುವಕರಲ್ಲಿ ತೇಜಸ್ಸು ಮಾಯವಾಗಿದೆ. ಇದನ್ನು ನೀವು ಗಳಿಸಿಕೊಳ್ಳಬೇಕು” ಎಂದರು.