ರಾಯಚೂರು : ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾ ಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಗಳು ಸಂತಾಪ ಸೂಚಿಸಿದ್ದಾರೆ. ದಾಳಿಯಲ್ಲಿ ಮೃತಪಟ್ಟ ರಾಜ್ಯದ ಮೂವರ ಕುಟುಂಬಕ್ಕೆ ಮಠದಿಂದ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಹೌದು ಇಂದು ಪರಿಹಾರ ಘೋಷಿಸಿ ಪಹಲ್ಗಾಮ್ ದಾಳಿಯ ಕುರಿತು ಮಾತನಾಡಿದ ಶ್ರೀಗಳು ನಮ್ಮ ಮಹಿಳೆಯರನ್ನ ರಕ್ಷಣೆ ಮಾಡಬೇಕು. ನಮ್ಮ ಧರ್ಮ, ದೇವಸ್ಥಾನ, ಮಠಮಾನ್ಯ ಶ್ರದ್ಧಾಕೇಂದ್ರಗಳನ್ನ ರಕ್ಷಣೆ ಮಾಡಬೇಕು. ನಿದ್ರಾವಸ್ಥೆಯಿಂದ ಎಚ್ಚೆತ್ತು ಮೇಲ್ಬರಬೇಕು. ಕಾಶ್ಮೀರದಲ್ಲಿ ನಡೆದ ಘಟನೆ ಎಲ್ಲಾದರೂ ನಡೆಯಬಹುದು. ಯಾರೂ ಎಚ್ಚರ ತಪ್ಪಿ ಇರಬಾರದು ಎಚ್ಚರಿಕೆಯಿಂದ ಇರಬೇಕು ಎಂದು ಕರೆ ನೀಡಿದರು.
ನಾವೆಲ್ಲಾ ಭಾರತೀಯರು ಶಾಂತಿ ಪ್ರಿಯರು. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಸಮುದಾಯದವರು ಒಂದೇ ತಾಯಿ ಮಕ್ಕಳು. ನಾವೆಲ್ಲರೂ ಒಂದೇ ನಮ್ಮಲ್ಲಿ ಬೇಧ ಭಾವನೆ ಇಲ್ಲ. ಆದರೆ ಬೇರೆ ದೇಶದವರು, ಉಗ್ರರು ಬಂದು ನಮ್ಮಲ್ಲಿ ಒಡೆದಾಳುವ ನೀತಿ ಮಾಡಿ ಜಾತಿ, ಕೋಮು ಗಲಭೆ ಸೃಷ್ಟಿಸುವ ಮೂಲಕ ಅಶಾಂತಿ ಉಂಟುಮಾಡುವ ದುಷ್ಟ ಕೃತ್ಯ ಮಾಡುತ್ತಿದ್ದಾರೆ. ಇಂಥಹ ಉಗ್ರರನ್ನ ನಾವೆಲ್ಲಾ ಸಂಘಟಿತರಾಗಿ ಎದುರಿಸಬೇಕು ಎಂದು ಕರೆ ನೀಡುತ್ತೇವೆ ಎಂದರು.
ಇಂದು ಶಿವಮೊಗ್ಗದಲ್ಲಿ ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗಾರದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಮಂಜುನಾಥ್ ಅವರ ಅಂತ್ಯಕ್ರಿಯೆ ಬ್ರಾಹ್ಮಣ ಸಮುದಾಯದಂತೆ ನೆರವೇರಿತು. ಪುತ್ರ ಅಭಿಜನ್ ತಂದೆಯ ಪಾರ್ತಿವ ಶರೀರಕ್ಕೆ ಅಗ್ನಿ ಸ್ಪರ್ಶಿಸಿ ಅಂತ್ಯಕ್ರಿಯೆ ನೆರವೇರಿಸಿದರು. ಅಲ್ಲದೆ ಮತ್ತೋರ್ವ ಕನ್ನಡಿಗನಾದ ಬೆಂಗಳೂರಿನ ಭರತ್ ಭೂಷಣ್ ಅವರ ಅಂತ್ಯಕ್ರಿಯೆ ಕೂಡ ಒಕ್ಕಲಿಗ ಸಂಪ್ರದಾಯದಂತೆ ಬೆಂಗಳೂರಿನ ಹೆಬ್ಬಾಳ ಚಿತಾಗಾರದಲ್ಲಿ ನೆರವೇರಿತು.