ಶಿವಮೊಗ್ಗ : ನಾನು ದೂರದಲ್ಲಿ ಕೂತಿದ್ದೆ. ಅಪ್ಪ ಅಮ್ಮ ನಂಗೆ ಏನೋ ತರೋಕೆ ಹೋದ್ರು. ನನ್ನನ್ನು ಅಲ್ಲೇ ಕೂರೋಕೆ ಹೇಳಿ ಹೋದ್ರು. ಮತ್ತೇ ಅಪ್ಪ ಅಮ್ಮನ ಜೊತೆ ನನ್ನ ಕರ್ಕೊಂಡು ಬರೋಕೆ ಹೇಳಿದ್ರು. ಅಮ್ಮ ನನ್ನ ಕರ್ಕೊಂಡು ಬರುತ್ತಿರುವಾಗ ಎಲ್ಲರೂ ಓಡೋಕೆ ಶುರುಮಾಡಿದ್ರು, ಆಗ ಅಲ್ಲಿ ಎಲ್ಲರಿಗೂ ಗೊತ್ತಾಗಿತ್ತು ಉಗ್ರರು ಫೈರಿಂಗ್ ಮಾಡುತ್ತಿದ್ದಾರೆ ಅಂತಾ. ನಾನು ಅಮ್ಮ ಓಡೋಕೆ ಶುರು ಮಾಡಿದ್ವಿ. ಅಪ್ಪ ಎಲ್ಲಿ ಅಂತಾ ಹಿಂದೆ ತಿರುಗಿ ನೋಡಿದ್ರೆ ಶೂಟ್ ಆಗಿ ಬಿದ್ದಿದ್ರು.
ಇದು ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಗ್ರ ಭೀಕರ ಗುಂಡಿನ ದಾಳಿಯಲ್ಲಿ ಬಲಿಯಾದ ಶಿವಮೊಗ್ಗದ ಮಂಜುನಾಥ್ ಅವರ ಪುತ್ರ ಅಭಿಜನ್ ಹೇಳಿದ ಮಾತುಗಳು.ನಮ್ಮ ಅಪ್ಪಾ ಅಲ್ಲಿ ಸತ್ರು ಅಂತಾ ಗೊತ್ತಾಗಿತ್ತು. ನಮ್ಮನ್ನೂ ಸಾಯಿಸಬೇಕಿತ್ತು ನಮ್ಮನ್ನು ಯಾಕೆ ಬಿಟ್ರಿ. ಅಪ್ಪನ್ನ ಸಾಯಿಸಿದ್ರಲ್ಲಾ ನಮ್ಮನ್ನು ಸಾಯಿಸಿ ಅಂತಾ ನಮ್ಮಮ್ಮ ಹೇಳಿದ್ದರು. ನಾನೂ ಉಗ್ರರ ಹತ್ರ ಹೋಗಿ ಕುತ್ತೇ ನಮ್ಮ ಅಪ್ಪನ್ನ ಸಾಯಿಸಿದ್ದಲ್ಲಾ ನಮ್ಮನ್ನು ಕೊಲ್ಲು ಅಂತಾ ಹೇಳಿದೆ. ಆಗ ಆ ಉಗ್ರ ಇಲ್ಲ, ಮೋದಿಗೆ ಹೋಗಿ ಹೇಳು ಎಂದು ಅಲ್ಲಿ ನಡೆದ ಭೀಕರತೆಯನ್ನು ವಿವರಿಸಿದರು.
ಹೆಂಡತಿ ಪಲ್ಲವಿ ಮತ್ತು ಮಗನೊಂದಿಗೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮಂಜುನಾಥ್ ಅವರು ಪ್ರವಾಸಕ್ಕೆ ಎಂದು ಕಾಶ್ಮೀರಕ್ಕೆ ತೆರಳಿದ್ದರು. ಈ ವೇಳೆ ಉಗ್ರರ ಗುಂಡಿನ ದಾಳಿಗೆ ಮಂಜುನಾಥ್ ಬಲಿಯಾಗಿದ್ದಾರೆ. ಇಂದು ಶಿವಮೊಗ್ಗಕ್ಕೆ ಮೃತ ಮಂಜುನಾಥ ಅವರ ಪಾರ್ಥಿವ ಶರೀರ ಆಗಮಿಸಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಮಂಜುನಾಥ ಅವರ ಅಂತ್ಯಕ್ರಿಯೆ ನೆರವೇರಲಿದೆ.