ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದು, ಉಗ್ರರ ದಾಳಿಯಲ್ಲಿ ಭಾಗಿಯಾಗಿರುವ ಆರೋಪದಡಿ 250 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಪಹಲ್ಗಾಮ್ ಉಗ್ರ ದಾಳಿಯ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳಿಗೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಪಾಕಿಸ್ತಾನದ ಉಗ್ರರಿಗೆ ಇಬ್ಬರು ಸ್ಥಳೀಯ ಉಗ್ರರು ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಾಲ್ವರು ಭಯೋತ್ಪಾದಕರ ಫೋಟೋಗಳನ್ನು ಬಿಡುಗಡೆ ಮಾಡಲಾಗಿದ್ದು, ಇವರು ಎಲ್ ಇಟಿ ಉಗ್ರ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ಶಂಕಿಸಲಾಗಿದೆ. ಇವರನ್ನು ಆಸೀಫ್, ಸುಲೇಮಾನ್, ಅಬು ಎಂದು ಗುರುತಿಸಲಾಗಿದೆ.
ಘಟನೆಯ ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ದಾಳಿಕೋರರನ್ನು ಇನ್ನೂ ಗುರುತಿಸಲಾಗಿಲ್ಲ, ಆದರೆ ದಾಳಿಯ ಹಿಂದಿನ ಉದ್ದೇಶ ಮತ್ತು ಜಾಲವನ್ನು ಪತ್ತೆಹಚ್ಚಲು ಗುಪ್ತಚರ ಸಂಸ್ಥೆಗಳು ಪ್ರತಿಯೊಂದು ಕೋನವನ್ನೂ ಪರಿಶೀಲಿಸುತ್ತಿವೆ. ಜೊತೆಗೆ ಕಾಶ್ಮೀರದಲ್ಲಿ 250 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.