ಬೆಂಗಳೂರು : ಕೋಟ್ಯಂತರ ಪಡೆದು ಸಾಲ ಪಾವತಿಸದೇ ಸಹಕಾರಿ ಬ್ಯಾಂಕ್ ಗೆ ವಂಚನೆ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಯಿತು.
ಹೌದು ಸಿಐಡಿ ಪೋಲಿಸರಿಂದ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟಿಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಯಿತು. ಸೌಭಾಗ್ಯಲಕ್ಷ್ಮಿ ಶುಗರ್ಸ ಲಿಮಿಟೆಡ್ ಕಂಪನಿಗೆ ಅಪೇಕ್ಸ್ ಬ್ಯಾಂಕ್ ಸಾಲ ನೀಡಿತ್ತು. 232 ಕೋಟಿ 88 ಲಕ್ಷ ರೂಪಾಯಿ ಸಾಲ ಪಡೆದು ಮರುಪಾವತಿಸದ ಹಿನ್ನೆಲೆಯಲ್ಲಿ ಅಪೇಕ್ಸ್ ಬ್ಯಾಂಕ್ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬ್ಯಾಂಕಿನ ಪರವಾಗಿ ಸಾಲಕ್ಕೆ ರಮೇಶ್ ಜಾರಕಿಹೊಳಿ ಗ್ಯಾರಂಟರ್ ಆಗಿದ್ದರು.
ಪ್ರಕರಣದ ಹಿನ್ನೆಲೆ
ಕರ್ನಾಟಕ ಸಹಕಾರ ಬ್ಯಾಂಕ್‌ನಿಂದ ಸೌಭಾಗ್ಯಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಪರವಾಗಿ ರಮೇಶ್ ಜಾರಕಿಹೊಳಿ 439 ಕೋಟಿ ಸಾಲ ಪಡೆದಿದ್ದರು. ನಂತರ ಸಾಲ ಪಡೆದ ಸಂದರ್ಭದಲ್ಲಿ ಬ್ಯಾಂಕ್ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ಸೌಭಾಗ್ಯಲಕ್ಷ್ಮೀ ಶುಗರ್ಸ್ ಲಿಮಿಟೆಡ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ಅರ್ಜಿದಾರ ರಮೇಶ್ ಜಾರಕಿಹೊಳಿ, ವಸಂತ್ ವಿ.ಪಾಟೀಲ್ ಮತ್ತು ಶಂಕರ್ ಪಾವಡೆ ಎಂಬುವರ ವಿರುದ್ಧ ಬೆಂಗಳೂರಿನ ವಿಶ್ವೇಶ್ವರ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಐಪಿಸಿ 406, 420 ಮತ್ತು 34ರ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಅರ್ಜಿ ಸಂಬಂಧ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ನಿರ್ದೇಶಕರ ಸ್ಥಾನಕ್ಕೆ ಅರ್ಜಿದಾರ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಸಾಲ ಪಡೆದ ಸಂದರ್ಭದಲ್ಲಿ ನಿರ್ದೇಶಕರಾಗಿದ್ದು, ಬಳಿಕ ಸಾಲ ಮರು ಪಾವತಿಗೂ ಮುನ್ನ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿರುವುದೇ ಅಪರಾಧ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪಡೆದ ಸಾಲವನ್ನು ಮರು ಪಾವತಿ ಮಾಡುವವರೆಗೂ ಅವರು ಖಾತರಿದಾರರಾಗಿ ಮುಂದುವರೆಯಲಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಭರವಸೆಯನ್ನೂ ನೀಡಿದ್ದಾರೆ. ಆದರೆ, ಕಂಪೆನಿಯ ನಿರ್ದೇಶಕರಾಗಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಿರ್ದೇಶಕರಾಗಿರದಿದ್ದರೂ, ಪಡೆದ ಸಾಲಕ್ಕೆ ಜವಾಬ್ದಾರರಾಗಿ ಹೊಣೆಗಾರರಾಗಿರುತ್ತಾರೆ ಎಂಬುದಾಗಿ ಸಾಲ ನೀಡಿದ ಸಂದರ್ಭದಲ್ಲಿ ಹೇಳಲಾಗಿದೆ ಎಂದು ವಿವರಿಸಿದರು.