ಶಿವಮೊಗ್ಗ: ನಾನು ಅವರಿವರು ಹಾಗೆ, ಹೀಗೆ ಅಂತ ಮಾತಾಡಿಕೊಳ್ತಾರೆ ಅನ್ನೋ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಗುರಿ ಏನಿದ್ದರೂ ನನಗೆ ಮತ ಹಾಕಿದಂತ ಮತದಾರರ ಮೇಲೆ. ಅವರಿಗಾಗಿ ಸಾಗರ ತಾಲ್ಲೂಕಿನ ಅಭಿವೃದ್ಧಿಯ ಕಡೆಗೆ. ನನ್ನ ಗುರಿ ಒಂದೇ ಅದು ಸಾಗರ, ಹೊಸನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಗೆ ಭೇಟಿ ನೀಡಿ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಇಡೀ ರಾಜ್ಯದ ಜನರು ಹೆಚ್ಚು ಹೆಚ್ಚಾಗಿ ಸಾಗರಕ್ಕೆ ಆಗಮಿಸುತ್ತಿದ್ದಾರೆ. ಕಾರಣ ಇಲ್ಲಿನ ಪ್ರವಾಸಿ ತಾಣಗಳು. ಸಿಗಂದೂರು, ಜೋಗದ ಜಲಪಾತ ಸೇರಿದಂತೆ ವೀಕ್ಷಣೆ ಮಾಡೋದಕ್ಕೆ ರೈಲು, ಕಾರು, ಬಸ್ಸುಗಳ ಮೂಲಕ ಆಗಮಿಸುತ್ತಿದ್ದಾರೆ. ಸಾಗರವನ್ನು ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಸರ್ಕಾರ ಬಂದು ಎರಡು ವರ್ಷ ಪೂರೈಸುತ್ತಿದೆ. ಸಾಗರದ ಪ್ರಮುಖ ರಸ್ತೆಗಳನ್ನು ಡಾಂಬಾರೀಕರಣಕ್ಕೆ ಚಾಲನೆ ನೀಡಲಾಗಿದೆ. ಸಾಗರ ನಗರವನ್ನು ಸುಂದರ ಸಿಟಿಯನ್ನಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ತಾಲ್ಲೂಕು ಸೌಧ ಮೂಲ ಸೌಕರ್ಯ ಅಭಿವೃದ್ಧಿಗೆ 4 ಕೋಟಿ ಅನುದಾನ ಬಿಡುಗಡೆ
ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಪುಡ್ ಕೋರ್ಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕೆಲವು ರಸ್ತೆಗಳನ್ನು ಅಭಿವೃದ್ಧಿ ಮಾಡೋಕೆ ಆಗುತ್ತಿಲ್ಲ ಎಂಬುದಾಗಿ ವಿಷಾದ ವ್ಯಕ್ತ ಪಡಿಸಿದಂತ ಅವರು, ಸುಸಜ್ಜಿತ ರಂಗ ಮಂದಿರ ನಿರ್ಮಾಣ ಮಾಡುವ ಒಲವನ್ನು ತೋರ್ಪಡಿಸಿದರು. ತಾಲ್ಲೂಕು ಸೌಧಕ್ಕೆ 4 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ಕಚೇರಿಗೆ ಅಗತ್ಯವಿರುವಂತ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದರು.
ಯುಜಿಡಿ ಕೆಲಸಕ್ಕಾಗಿ 20 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ 70 ಕೋಟಿ ರೂಪಾಯಿ ನನ್ನ ಅವಧಿಯಲ್ಲಿ ತಂದಿದ್ದೆ. ಈಗ 20 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅರ್ಧ ಕಾಮಗಾರಿ ಆಗಿ, ಅಲ್ಲಿಗೆ ನಿಂತಿತ್ತು. ಈಗ ಮುಂದುವರೆಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಇಂತಹ ಅಭಿವೃದ್ಧಿ ಕೆಲಸಗಳಿಗೆ ಕಾಳಜಿ ಇರಬೇಕು. ಮನಸ್ಥಿತಿ ಇರಬೇಕು. ಕೇವಲ ಕೆರೆ ಅಭಿವೃದ್ಧಿ ಮಾತ್ರವೇ ಮಾಡೋದಲ್ಲ. ಎಲ್ಲಾ ಅಭಿವೃದ್ಧಿ ಕೆಲಸ ಮಾಡಬೇಕು. ಸಾಗರ ನಗರದ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಾನು ಬದ್ಧವಾಗಿದ್ದೇನೆ. ನಾನು ಹಾಲಪ್ಪ ಕೊಟ್ಟಿದ್ದಂತ ವರ್ಕ್ ಅನ್ನು ಉದ್ಘಾಟನೆ ಮಾಡೋದಕ್ಕೆ ಹೋಗೋದಿಲ್ಲ. ನಾನು ಮಾಡಿದಂತ ಅಭಿವೃದ್ಧಿ ಕಾರ್ಯಗಳನ್ನು ಮಾತ್ರವೇ ಉದ್ಘಾಟನೆ ಮಾಡುವುದಾಗಿ ತಿಳಿಸಿದರು.
ಸಾಗರದಲ್ಲಿ ನಮ್ಮ ಕ್ಲಿನಿಕ್ ಓಪನ್
ಜನಸಾಮಾನ್ಯರಿಗೆ ಅಗತ್ಯವಿರುವಂತ ಕೆಲಸ ಮೊದಲು ಮಾಡಬೇಕು. ಸಾಗರದಲ್ಲಿ ನಮ್ಮ ಕ್ಲಿನಿಕ್ ಓಪನ್ ಆಗಲಿದೆ. ಸಾಗರದ ಟಿವಿಎಸ್ ಶೋ ರೂಂ ಬಳಿಯಲ್ಲಿ ಓಪನ್ ಆಗಲಿದೆ. ವೈದ್ಯರು ಸೇರಿದಂತೆ ಇತರೆ ಆರೋಗ್ಯ ಕಾರ್ಯಕರ್ತೆಯರು ಅಲ್ಲಿ ಕೆಲಸ ಮಾಡಲಿದ್ದಾರೆ. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಕೆಲಸವಾಗಲಿದೆ. ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಸಾಗರದ ಗ್ರಾಮಾಂತರ ಭಾಗದಲ್ಲಿ ಆಸ್ಪತ್ರೆ ನಿರ್ಮಾಣ. ಬ್ಯಾಕೋಡಿನ ಸುಳ್ಳಳ್ಳಿ, ಮಂಚಾಲೆ ಮತ್ತು ಬೊಮ್ಮತ್ತಿಯಲ್ಲಿ ಆಸ್ಪತ್ರೆ ನಿರ್ಮಾಣ ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.
ಪ್ರಗತಿ ಪಥ ಯೋಜನೆಯಡಿ 40 ಕಿಲೋಮೀಟರ್ ರಸ್ತೆ ಅಭಿವೃದ್ಧಿ
ಕೇಂದ್ರ ಸರ್ಕಾರದ ರಸ್ತೆ ಅಭಿವೃದ್ಧಿ ಯೋಜನೆ ನಿಂತುಹೋಗಿದೆ. 2 ವರ್ಷ ಆಯ್ತು ರಸ್ತೆ ಬಂದಿಲ್ಲ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಜೊತೆಗೆ ಮಾತುಕತೆ ನಡೆಸಲಾಯಿತು. ಸಿಎಂ ಸಿದ್ಧರಾಮಯ್ಯ ನಮ್ಮದೇ ಒಂದು ಸ್ಕೀಂ ಮಾಡೋಣ ಅಂತ ಪ್ರಗತಿ ಪಥ ಎನ್ನುವ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 40 ಕಿಲೋಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. 20 ಕೋಟಿಯಷ್ಟು ಅಭಿವೃದ್ಧಿ ಕಾಮಗಾರಿ ನಡೆಯಲಿದೆ ಎಂದರು.
ಕಾಲೇಜು ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಡಿಗ್ರಿ ಕಾಲೇಜಿಗೆ ನ್ಯಾಕ್ ಕಮಿಟಿ ಬರುವ ಪೂರ್ವದಲ್ಲಿ ಅದಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನು ವ್ಯವಸ್ಥೆ ಮಾಡಲಾಗಿದೆ. ನ್ಯಾಕ್ ಕಮಿಟಿಯವರು ಒಳ್ಳೆಯ ಮಾರ್ಕ್ಸ್ ಕೊಟ್ಟು ಹೋಗಿದ್ದಾರೆ ಎಂದರು.
ಕೇರಳ ಮಾದರಿಯಲ್ಲಿ ಗಣಪತಿ ದೇವಸ್ಥಾನ ಅಭಿವೃದ್ಧಿ
ಗಣಪತಿ ದೇವಸ್ಥಾನವನ್ನು ಸಾಗರದ ಹೆಬ್ಬಾಗಿಲ ರೀತಿಯಲ್ಲಿ ಅಭಿವೃದ್ಧಿ ಪಡಿಸಿವುದು ಆಗಿದೆ. ನಾನು ಗಣಪತಿ ಕೆರೆಯ ವಿಚಾರಕ್ಕೆ ಹೋಗುವುದಿಲ್ಲ. ಗಣಪತಿ ದೇವಸ್ಥಾನವನ್ನು ಮಾಡೋದು ಮಾತ್ರವೇ ನನ್ನ ಮುಂದಿನ ಗುರಿಯಾಗಿದೆ. ಕೇರಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸೋದಕ್ಕೆ ಸ್ಕೆಚ್ ರೆಡಿಯಾಗಿದೆ. ದಾನಿಗಳು ಕೂಡ ನೆರವಾಗಲಿದ್ದಾರೆ. ಸರ್ಕಾರದಿಂದ ಎಷ್ಟು ಕೋಟಿ ಬೇಕಾದರೂ ನಾನು ತರೋದಕ್ಕೆ ಸಿದ್ಧನಿದ್ದೇನೆ. ನಾನು ಗಣಪತಿ ದೇವಸ್ಥಾನ ಅಭಿವೃದ್ಧಿ ಸಂಬಂಧ ಸಾರ್ವಜನಿಕರ ಸಭೆ ನಡೆಸಿ ಅವರಿಂದ ಅಹವಾಲು ಸ್ವೀಕರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪಾರ್ಕ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಇದಲ್ಲದೇ ಸಾಗರ ಬಸ್ ನಿಲ್ದಾಣ ಹಳೆಯದಾಗಿದೆ. ರಮಾನಾಥ್ ರೈ ಅವರು ಸಾರಿಗೆ ಸಚಿವರಾಗಿದ್ದಂತ ಸಂದರ್ಭದಲ್ಲಿ ನಿರ್ಮಿಸಿದ್ದಾಗಿದೆ. ಅದನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಸಾಗರದಲ್ಲಿ ಏನೇನು ಅಭಿವೃದ್ಧಿ ಆಗಬೇಕು. ಆ ಎಲ್ಲಾ ಕೆಲಸವನ್ನು ಮಾಡೋದೇ ನನ್ನ ಕೆಲಸವಾಗಿದೆ ಎಂಬುದಾಗಿ ತಿಳಿಸಿದರು.
ನಾನು ಓದಿದ್ದು ಕಡಿಮೆಯೇ, ಹಾಗಂತ ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ
ನಾನು ಓದಿರೋದು ಕಡಿಮೆ ಅಂತ ಅನೇಕರು ಹೇಳುತ್ತಿದ್ದಾರೆ. ಹೌದು ನಾನು ಓದಿರೋದು ಕಡಿಮೆಯೇ, ಹಾಗಂತ ಅಭಿವೃದ್ಧಿಯ ಕೆಲಸಗಳಲ್ಲಿ ಹಿಂದಿಲ್ಲ. ಸಾಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಎಷ್ಟು ಸಾಧ್ಯವೋ ಅಷ್ಟು ಮಾಡುತ್ತಿದ್ದೇನೆ. ಗುಂಡೂರಾವ್ ಕೂಡ ಕಡಿಮೆಯೇ ಓದಿದ್ದು. ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿಲ್ಲವೇ? ನನ್ನ ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಅವರ ಸೇವೆಯನ್ನು ಸಾಧ್ಯವಾದಷ್ಟು ಮಾಡುವ ಕೆಲಸ ಮಾಡುತ್ತೇನೆ. ನನ್ನ ಬಗ್ಗೆ ಯಾರು ಏನೇ ಮಾತನಾಡಿದರೂ ತಲೆ ಕೆಡಿಸಿಕೊಳ್ಳೋದಿಲ್ಲ. ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಹೇಳಿದರು.
ಮುಂದಿನ ತಿಂಗಳು ಸ್ವಿಮ್ಮಿಂಗ್ ಪೂಲ್ ಓಪನ್
ಸ್ವಿಮ್ಮಿಂಗ್ ಪೂಲ್ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಈಗಾಲೇ ನಾನು ಪರಿಶೀಲನೆ ಮಾಡಿ ಬಂದಿದ್ದೇನೆ. ಅಂತಿಮ ಕೆಲಸ ನಡೆಯುತ್ತಿದೆ. ಮೇ ವೇಳೆಗೆ ಮುಕ್ತಾಯಗೊಳ್ಳಲಿದೆ. ಮೇ.1ರಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳಿಸಲಾಗುತ್ತದೆ. ಅಲ್ಲಿಯೇ ಬೇಸಿಗೆ ಶಿಬಿರವನ್ನು ಮಾಡುವ ಮೂಲಕ ಜನರ ಸೇವೆಗೆ ಲಭ್ಯವಾಗುವಂತೆ ಮಾಡುವ ಕೆಲಸ ಮಾಡುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಜನಿವಾರ ಬ್ರಾಹ್ಮಣ ಸಮುದಾಯದ ಸಂಕೇತ, ತೆಗೆಸಿದ್ದನ್ನು ಉಗ್ರವಾಗಿ ಖಂಡನೆ: ಶಾಸಕ ಗೋಪಾಲಕೃಷ್ಣ ಬೇಳೂರು
BREAKING : ಕನ್ನಡಿಗನ ಮೇಲೆ ಹಲ್ಲೆ ನಡೆಸಿದ ‘ವಿಂಗ್ ಕಮಾಂಡರ್ ‘ವಿರುದ್ಧ ಕಠಿಣ ಕ್ರಮ : CM ಸಿದ್ದರಾಮಯ್ಯ ಆದೇಶ.!