ದಕ್ಷಿಣಕನ್ನಡ : ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತದೆ ಸಿದ್ಧವಾಗಿರಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು.
ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿ, ಕಾಂಗ್ರೆಸ್ ಮಾತ್ರ ಎಲ್ಲ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತದೆ. ಗಾಂಧೀಜಿ ತತ್ವ ಸಂವಿಧಾನವನ್ನು ಉಳಿಸಿಕೊಂಡು ಹೋಗಬೇಕಿದೆ. ಈ ವರ್ಷ ಸಂಘಟನೆ ವರ್ಷ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಘೋಷಿಸಿದ್ದಾರೆ. ನಾವು 5 ಗ್ಯಾರಂಟಿ ಘೋಷಿಸಿದಾಗ ಬಿಜೆಪಿಯವರು ಸಾಧ್ಯವಿಲ್ಲ ಅಂತ ಅಂದರು.
ಬಿಜೆಪಿಗೆ ವೋಟ್ ಹಾಕಿದವರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ಹೇಳಿದ್ದಾರೆ. ಈ ಹಿಂದೆ ಕರಾವಳಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿತ್ತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಭರವಸೆ ಇದೆ. ಯಾವುದೇ ಕ್ಷಣದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಬರುತ್ತದೆ ಸಿದ್ಧವಾಗಿರಿ. ಕಾಂಗ್ರೆಸ್ ಪಕ್ಷ ಮಾತ್ರ ಈ ದೇಶಕ್ಕೆ ಒಳ್ಳೆಯದನ್ನು ಮಾಡುತ್ತದೆ. ಬೇರೆಯವರು ಭಾವನೆಗಳ ಮೇಲೆ ಹೋಗುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಹರಿಹಾಯ್ದರು.
ರಾಜಕಾರಣದಲ್ಲಿ ಯಾರು ಪರ್ಮನೆಂಟ್ ಅನ್ನೋರು ಇರುವುದಿಲ್ಲ ನಾನು ಎಷ್ಟೇ ಬಾರಿಗೆದ್ದರೂ ಕೂಡ ಪರ್ಮನೆಂಟ್ ಅಂತ ಇಲ್ಲ. ಹಾಗಾಗಿ ನೀವು ಜನರ ಹೃದಯದಲ್ಲಿ ಮೊದಲು ಅದನ್ನು ಮಾಡಿ. ನಿಮ್ಮ ಹೃದಯ ಉಪಯೋಗಿಸಿ ಬೇರೆಯವರನ್ನು ಗೆಲ್ಲುವ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.