ಹಾವೇರಿ : ಶಿಕ್ಷಕರೊಬ್ಬರ ಅಮಾನತು ಆದೇಶವನ್ನು ಹಿಂಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಒಬ್ಬರು 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದು, 15 ಸಾವಿರ ಪಡೆದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಗಿ ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಮಾನತುಕೊಂಡಿದ್ದ ನೊಂದ ಶಿಕ್ಷಕರೊಬ್ಬರ ದೂರಿನ ಮೇರೆಗೆ ಇಂದು ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್ ಹ್ಯಾಂಡ್ ಆಗಿ ಬಲೆಗೆ ಬೀಳಿಸಿದ್ದಾರೆ. ಸದ್ಯ ಮೌನೇಶ್ ಬಡಿಗೇರ್ ಅವರನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಮೌನೇಶ್, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಶಿಕ್ಷಕರೊಬ್ಬರ ಅಮಾನತು ಆಗಿತ್ತು. ಅಮಾನತು ಆದೇಶ ಹಿಂಪಡೆಯುವಂತೆ ಶಿಕ್ಷಕರು ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ್ದ ಮೌನೇಶ್, ₹ 50 ಸಾವಿರ ಕೊಟ್ಟರೆ ಆದೇಶ ಹಿಂಪಡೆಯುವುದಾಗಿ ಹೇಳಿದ್ದರು ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ಹೇಳಿವೆ.