ನವದೆಹಲಿ : ನ್ಯಾಷನಲ್ ಹೆರಾಲ್ಡ್ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಪಾತ್ರವಹಿಸಿರುವ ಜಾರಿ ನಿರ್ದೇಶನಾಲಯ (ED) ಇದೀಗ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ED ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಗಾಂಧಿ ಕುಟುಂಬಕ್ಕೆ ಸೇರಿದ 700 ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಸಿದ್ಧತೆ ಮಾಡಿಕೊಂಡಿದ್ದು, ಪ್ರಕರಣದ ವಿಚಾರಣೆಯನ್ನು ಈ ವೇಳೆ ನ್ಯಾಯಾಲಯ ಏಪ್ರಿಲ್ 25ಕ್ಕೆ ಮುಂದೂಡಿತು. ಗಾಂಧಿ ಕುಟುಂಬದ ವಿರುದ್ಧ ಇಡಿಯಿಂದ ಇಂದು ಮೊದಲ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಯಿತು.
ಬರೋಬ್ಬರಿ 661 ಕೋಟಿ ರೂ. ಮುಟ್ಟುಗೊಲು
ಇಡೀ ಪ್ರಕರಣದ ಹಿಂದಿನ ಹಿನ್ನೆಲೆ 2014ರಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನಲ್ಲಿ ದೊರಕಿದ್ದು, ಈ ದೂರಿನ ಆಧಾರದ ಮೇಲೆ 2021ರಲ್ಲಿ ED ತನಿಖೆಯನ್ನು ಪ್ರಾರಂಭಿಸಿತು. ದೂರಿನಲ್ಲಿ, ಕ್ರಿಮಿನಲ್ ಪಿತೂರಿ ಮೂಲಕ ಎಜಿಎಲ್‌ನ 2,000 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಯಂಗ್ ಇಂಡಿಯನ್ ಮೂಲಕ ಕೇವಲ 50 ಲಕ್ಷ ರೂ.ಗೆ ಕಬಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಇದೀಗ ED ತನಿಖೆಯಿಂದ ಬಹಿರಂಗವಾದಂತೆ, 988 ಕೋಟಿ ರೂ.ಗಳ ಕ್ರಿಮಿನಲ್ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದು ಕಂಡುಬಂದಿದೆ. ಇದರಲ್ಲಿ 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳ ಜೊತೆಗೆ, 90.2 ಕೋಟಿ ರೂ. ಮೌಲ್ಯದ ಎಜಿಎಲ್ ಷೇರುಗಳೂ ಸೇರಿವೆ. ಈ ಆಸ್ತಿಗಳನ್ನು ಮೊದಲಿಗೆ 2023ರ ನವೆಂಬರ್ 20ರಂದು ತಾತ್ಕಾಲಿಕವಾಗಿ ಜಪ್ತಿ ಮಾಡಲಾಗಿತ್ತು.